ನವದೆಹಲಿ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನ ಅಡಗುತಾಣ ಪತ್ತೆ ಹಚ್ಚಲು ಭಾರತ ಮಹತ್ವದ ಸುಳಿವು ನೀಡಿತ್ತು ಎಂದು ಮಾಜಿ ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಡಾ. ಎಸ್,ಡಿ ಪ್ರಧಾನ್ ಹೇಳಿದ್ದಾರೆ.
ಲಾಡೆನ್ ಹತ್ಯೆಗೂ ಮುನ್ನ ಅಮೆರಿಕ ಮತ್ತು ಭಾರತ ನಡುವೆ ಗುಪ್ತಚರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು ಎಂದು ಪ್ರಧಾನ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಈ ಮಾಹಿತಿಯನ್ನು ಹೊರಹಾಕಿದ್ದಾರೆ.
2006-07 ಪಾಕಿಸ್ತಾನದಲ್ಲಿ ಎರಡು ಮಹತ್ವದ ಸಭೆಗಳು ನಡೆದಿದ್ದವು. ಈ ಸಭೆಯಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ನಂ.2 ನಾಯಕನಾಗಿದ್ದ ಅಲ್ ಜವಾಹಿರಿ ಹಾಗೂ ಲಾಡೆನ್ ನ ಪರಮಾಪ್ತನಾಗಿದ್ದ ಮುಲ್ಲಾ ಓಮರ್ ಭಾಗವಹಿಸಿದ್ದರು.
ಸಭೆ ಮುಗಿದ ಬಳಿಕ ಆ ಇಬ್ಬರು ರಾವಲ್ಪಿಂಡಿಗೆ ತೆರಳಿ ಕಣ್ಮರೆಯಾಗಿದ್ದರು. ಇದರ ಆಧಾರದ ಮೇಲೆ ಭಾರತ ಅಮೆರಿಕಕ್ಕೆ ಲಾಡೆನ್ ರಾವಲ್ಪಿಂಡಿ ಆಸುಪಾಸಿನಲ್ಲೇ ಅವಿತಿರಬಹುದು ಎಂಬ ಮಾಹಿತಿಯನ್ನು ನೀಡಿತ್ತು.
ಈ ಮಾಹಿತಿ ಆಧಾರದ ಮೇಲೆ ಅಮೆರಿಕ ಗುಪ್ತಚರ ಪಡೆಗಳು ಲಾಡೆನ್ ಅಡಗುತಾಣ ಪತ್ತೆ ಹಚ್ಚಿರುವ ಸಾಧ್ಯೆ ಹೆಚ್ಚಿದೆ ಎಂದು ಪ್ರಧಾನ್ ಹೇಳಿದ್ದಾರೆ.