ಶ್ರೀನಗರ: ಹಿಜ್ಬುಲ್ ಉಗ್ರ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಬಳಿಕ ಕಣಿವೆ ರಾಜ್ಯದಲ್ಲಿ ಉಂಟಾಗಿದ್ದ ವ್ಯಾಪಕ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದ್ದು, ಗಲಭೆಯಲ್ಲಿ ಗಾಯಗೊಂಡ ಓರ್ವ ಗಾಯಾಳು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಗರದಲ್ಲಿ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು 17 ವರ್ಷದ ಇಶ್ಫಾಕ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಜುಲೈ 23ರಂದು ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿ ಯೋಧರೊಂದಿಗೆ ನಡೆದ ಘರ್ಷಣೆಯಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದ. ಯೋಧರ ವಿರುದ್ಧ ಕಲ್ಲು ತೂರಾಟ ಮಾಡಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಮಲಗಿದ್ದ ಈತನನ್ನು ಯೋಧರೇ ಸ್ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಸತತ 7 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಈತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಶ್ಫಾಕ್ ಅಹ್ಮದ್ ದಾರ್ ಸಾವಿನೊಂದಿಗೆ ಆ ಮೂಲಕ ಕಾಶ್ಮೀರ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಇನ್ನು ಕಾಶ್ಮೀರ ಗಲಭೆ ಹಿನ್ನಲೆಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಪ್ರಸ್ತುತ ಬಹುತೇಕ ನಗರಗಳಲ್ಲಿ ಹಿಂಪಡೆಯಲಾಗಿದೆಯಾದರೂ, ಅನಂತ್ ನಾಗ್, ಪುಲ್ವಾಮ, ಬಾರಾಮುಲ್ಲಾ ಜಿಲ್ಲೆಗಳ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಈ ಪ್ರದೇಶಗಲ್ಲಿ ಯಾವುದೇ ಕ್ಷಣದಲ್ಲಿ ಹಿಂಸಾಚಾರ ಭುಗಿಲೇಳಬಹುದು ಎಂಬ ಕಾರಣದಿಂದಾಗಿ ಇಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.