ಪುಣೆ: ಈ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಇದೆ ಹೇಳಿಕೆ ನೀಡಿದ್ದ ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ದೇಶದಲ್ಲಿದ್ದು, ದೇಶದ ವಿರುದ್ಧ ಮಾತನಾಡುವವರು ಸಾಮರಸ್ಯ ಕದಡುವ ಯತ್ನ ಮಾಡುತ್ತಿದ್ದು, ಅವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಭಾನುವಾರ ಹೇಳಿದ್ದಾರೆ.
ಇಂದು ಪುಣೆಯಲ್ಲಿ ಪತ್ರಕರ್ತ ನಿತಿನ್ ಗೋಖಲೆಯವರ ಸಿಯಾಚಿನ್ ಎಂಬ ಪುಸ್ತಕದ ಮರಾಠಿ ಅವತರಣಿಕೆ ಬಿಡುಗಡೆ ಮಾಡಿ ಮಾತನಾಡಿದ ಪರಿಕ್ಕರ್, ನಟನೊಬ್ಬ ದೇಶ ಬಿಟ್ಟು ಹೋಗುವುದಾಗಿ ಹೇಳುತ್ತಾರೆ, ಇದು ಉದ್ಧಟತನದ ಹೇಳಿಕೆ, ಮನೆ ಎಷ್ಟೆ ಚಿಕ್ಕದಿದ್ದರೂ ಮನೆ ತೊರೆಯುವ ಮಾತನ್ನಾಡದೆ, ಇರುವ ಜಾಗದಲ್ಲೆ ಬಂಗಲೆ ಕಟ್ಟುವ ಕನಸು ಕಾಣಬೇಕು ಎಂದು ಆಮಿರ್ ಖಾನ್ ಹೆಸರು ಹೇಳದೆ ಪರೋಕ್ಷವಾಗಿ ಚಾಟಿ ಬೀಸಿದರು.
ಆಮಿರ್ ಖಾನ್ ಅವರು ಕಳೆದ ನವಂಬರ್ನಲ್ಲಿ ದೇಶದಲ್ಲಿ ಅಸಹಿಷ್ಣತೆ ಇದೆ ಆದ್ದರಿಂದ ಹೆಂಡತಿ ದೇಶ ತೊರೆಯಲು ಸಲಹೆ ನೀಡಿದ್ದಾಳೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.