ಬೆಂಗಳೂರು: ಆಗಸ್ಟ್ 1-8 ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ನಡೆಯಲಿದ್ದು, ಕರ್ನಾಟಕದಲ್ಲಿ ಶಿಶುಗಳ ಸಾವಿನ ಸಂಖ್ಯೆ 1,000 ಕ್ಕೆ 31 ರಷ್ಟಿದ್ದು, ಅವಧಿ ಪೂರ್ವ ಜನನವಾಗುವ ಶಿಶುಗಳು ಶೇ.23 ರಷ್ಟಿವೆ ಎಂದು ತಿಳಿದುಬಂದಿದೆ.
ಇನ್ನು ನವಜಾತ ಶಿಶುಗಳಿಗೆ ಸ್ತನ್ಯಪಾನ ಅತ್ಯಗತ್ಯವಾಗಿದ್ದು, ಕರ್ನಾಟಕದಲ್ಲಿ ಎದೆ ಹಾಲಿನ ಬ್ಯಾಂಕ್ ಇಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ. ಯಾವುದೇ ತಾಯಂದಿರು ಮಗುವಿಗೆ ಸಾಕಾಗುವಷ್ಟು ಹಾಲನ್ನು ಹೊಂದಿಲ್ಲದೆ ಇದ್ದರೆ ಕೆಲವು ಸಂದರ್ಭಗಳಲ್ಲಿ ಫಾರ್ಮುಲಾ ಮಿಲ್ಕ್ ಪೌಡರ್‌ಗಳನ್ನು ಎಳೆಯ ಮಕ್ಕಳಿಗೆ ನೀಡಲು ಸೂಚಿಸಲಾಗುತ್ತದೆ. ಸ್ತನ್ಯಪಾನ ಮಾಡಿಸುವುದರಿಂದ ಮಕ್ಕಳಿಗೆ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಬಹುದು ಎಂದು ಮಣಿಪಾಲ ಮಕ್ಕಳ ಕೇಂದ್ರದ ಶಿಶುತಜ್ಞ ಡಾ.ಕಾರ್ತಿಕ್ ನಾಗೇಶ್ ಹೇಳಿದ್ದಾರೆ.
ಅವಧಿ ಪೂರ್ವ ಜನಿಸುವ ಶಿಶುಗಳ ರಕ್ಷಣೆಗೆ ಸ್ತನ್ಯಪಾನ ಸಹಕಾರಿಯಾಗಿದ್ದು, ಇಂತಹ ಸಂದರ್ಭಗಳಲ್ಲಿ ಎದೆ ಹಾಲಿನ ಬ್ಯಾಂಕ್ ನೆರವಾಗಲಿದೆ. ಆದರೆ ಕರ್ನಾಟಕದಲ್ಲಿ ಈ ವರೆಗೂ ಇಂತಹ ಸೌಲಭ್ಯ ಇಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಎದೆ ಹಾಲಿನ ಬ್ಯಾಂಕ್ ನ್ನು ಪ್ರಾರಂಭಿಸಲು ಸುಮಾರು 1 ರಿಂದ 2 ಕೋಟಿ ವೆಚ್ಚವಾಗಲಿದೆ ಎಂದು ಶಿಶು ತಜ್ಞ ಡಾ. ಕಾರ್ತಿಕ್ ನಾಗೇಶ್ ತಿಳಿಸಿದ್ದಾರೆ. ರಾಜಸ್ತಾನ, ಪಶ್ಚಿಮ ಬಂಗಾಳ, ನೆರೆಯ ರಾಜ್ಯ ತಮಿಳುನಾಡಿನಲ್ಲೂ ಸರ್ಕಾರಿ ಅಥವಾ ಎನ್ ಜಿ ಒ ಗಳು ನಡೆಸುತ್ತಿರುವ ಎದೆ ಹಾಲಿನ ಬ್ಯಾಂಕ್ ಗಳಿವೆ ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನಷ್ಟೇ ಪ್ರಾರಂಭವಾಗಬೇಕಿದೆ.