ನವದೆಹಲಿ: ಈ ಬಾರಿ ಮಾನ್ಸೂನ್ ಕೊರತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಹವಾಮಾನ ಇಲಾಖೆ, ಈ ವರ್ಷ ಶೇ.96ರಷ್ಟು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಗುರುವಾರ ಹೇಳಿದೆ.
ಮಾನ್ಸೂನ್ ಗೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹವಾಮಾನ ಇಲಾಖೆ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ಅವರು, ಮುಂದಿನ ನಾಲ್ಕೈದು ದಿನಗಳಲ್ಲಿ ಮಾನ್ಸೂನ್ ಕೇರಳ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಜುಲೈ ಮತ್ತು ಆಗಸ್ಟ್ನಲ್ಲಿ ಸಾಕಷ್ಟು ಮಳೆ ಆಗುವ ಸಾಧ್ಯತೆ ಇದೆ ಎಂದರು.
ಜುಲೈನಲ್ಲಿ ಸರಾಸರಿ 107% ರಷ್ಟು, ಆಗಸ್ಟ್ನಲ್ಲಿ 104% ರಷ್ಟು ಮಳೆ ಆಗಲಿದೆ. ಜೂನ್ 5 ಅಥವಾ 6ರಂದು ದಕ್ಷಿಣ ಒಳನಾಡು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲಿದ್ದು, ಈ ಪ್ರದೇಶದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ ಮಳೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿದ್ದಾರೆ.
ದೇಶದ ವಾಯುವ್ಯ ಭಾಗದಲ್ಲಿ ಸರಾಸರಿ 108%ರಷ್ಟು, ಮಧ್ಯ ವಲಯದಲ್ಲಿ 113%ರಷ್ಟು, ದ್ವೀಪ ಪ್ರದೇಶಗಳಲ್ಲಿ 113% ರಷ್ಟು ಹಾಗೂ ಈಶಾನ್ಯ ವಲಯಗಳಲ್ಲಿ 94%ರಷ್ಟು ಮಳೆಯಾಗುವ ಸಾಧ್ಯತೆಗಳು ಇವೆ ಎಂದು ತಿಳಿಸಿರುವ ಅವರು ಮುಂಗಾರು ಕೊರತೆಯಾಗುವ ಸಾಧ್ಯತೆಗಳೇನು ಇಲ್ಲ ಎಂದಿದ್ದಾರೆ.