ದೇಶ

ಭೂ ಹಗರಣ ಆರೋಪ ನಿರಾಧಾರ; ಇದು ಕೇವಲ ಮಾಧ್ಯಮಗಳ ಪಿತೂರಿ: ಏಕನಾಥ್ ಖಡ್ಸೆ

Sumana Upadhyaya

ಮುಂಬೈ: ಬಿಜೆಪಿಯ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ವಿರುದ್ಧ ಕೇಳಿಬರುತ್ತಿರುವ ಆಧಾರರಹಿತ ಆರೋಪದ ವಿರುದ್ಧ ಪಕ್ಷ ದೃಢವಾಗಿ ತಮ್ಮ ಬೆಂಬಲಕ್ಕೆ ನಿಂತಿದೆ ಎಂದು ಏಕನಾಥ ಖಡ್ಸೆ ಹೇಳಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ ನಂತರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಆದರೆ ಈ ರೀತಿ ಹಿಂದೆಂದೂ ನಾನು ಮಾಧ್ಯಮಗಳ ವಿಚಾರಣೆಯನ್ನು ಎದುರಿಸಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ವ್ಯಾಪಕ ಮಾಧ್ಯಮ ಪಿತೂರಿ ನಡೆದಿದೆ. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಕುರಿತು ತನಿಖೆ ನಡೆಯಬೇಕೆಂದು ಮುಖ್ಯಮಂತ್ರಿಯವರನ್ನು ನಾನು ಒತ್ತಾಯಿಸಿದ್ದೇನೆ. ಬಿಜೆಪಿ ದೃಢವಾಗಿ ನನ್ನ ಪರವಾಗಿ ನಿಂತಿದೆ. ಮುಂದೆಯೂ ನನ್ನ ಪರವಾಗಿ ಪಕ್ಷ ಇರುತ್ತದೆ. ಬಿಜೆಪಿ ಯಾವತ್ತೂ ನೈತಿಕ ಮೌಲ್ಯವನ್ನು ಎತ್ತಿಹಿಡಿಯುತ್ತಾ ಬಂದಿದೆ. ಆರೋಪ ಎದುರಿಸುತ್ತಿರುವಾಗ ಅಧಿಕಾರ ಹೊಂದಿರಬಾರದು ಎಂದು ಪಕ್ಷ ಯಾವತ್ತೂ ಅಭಿಪ್ರಾಯ ಹೊಂದಿಕೊಂಡು ಬಂದಿದೆ ಎಂದು ಹೇಳಿದರು.

ಖಾಡ್ಸೆ ತಮ್ಮ ಪತ್ನಿ ಹೆಸರಿನಲ್ಲಿ ಪುಣೆಯ ಹತ್ತಿರ ಬೊಸರಿಯಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಪುಣೆ ಮೂಲದ ಬಿಲ್ಡರ್ ಹೇಮಂತ್ ಗವಾಂಡೆಯವರ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಎಂಐಡಿಸಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಕಂದಾಯ ಇಲಾಖೆಯೇ ಹೇಳಿದೆ ಎಂದರು.

ಕಾಂಗ್ರೆಸ್ ಮತ್ತು ಆಪ್ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ಆಧಾರರಹಿತವಾಗಿದೆ. ಈ ಹಿಂದೆ ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಗಡ್ಕರಿಯವರ ವಿರುದ್ಧ ಕೂಡ ಆರೋಪ ಮಾಡಲಾಗಿತ್ತು. ದಾವೂದ್ ಇಬ್ರಾಹಿಂನಿಂದ ಕರೆ ಸ್ವೀಕರಿಸಿರುವ ಅಥವಾ ಕರೆ ಮಾಡಿರುವ ಯಾವುದೇ ದಾಖಲೆಯಿಲ್ಲ ಎಂದು ಖಡ್ಸೆ ಸ್ಪಷ್ಟಪಡಿಸಿದ್ದಾರೆ.

SCROLL FOR NEXT