ದೇಶ

ಸುಬ್ರಮಣಿಯನ್ ಸ್ವಾಮಿ ನನ್ನ ಹೀರೋ: ಸಚಿವೆ ಉಮಾ ಭಾರತಿ

Manjula VN

ನವದೆಹಲಿ: ವಿವಾದಿತ ಆಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿರುವ ಮಾತಿನ ಮೇಲೆ ನನಗೆ ಸಂಪೂರ್ಣವಾದ ನಂಬಿಕೆಯಿದ್ದು, ಸುಬ್ರಮಣಿಯನ್ ಸ್ವಾಮಿ ಅವರು ನನ್ನ ಹೀರೋ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಭಾನುವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸ್ವಾಮಿ ಅವರನ್ನು ಬಹಳ ಗೌರವಿಸುತ್ತೇನೆ. ಸುಬ್ರಮಣಿಯನ್ ಸ್ವಾಮಿ ಅವರು ನನ್ನ ಹೀರೋ. ನಾನು 15-16 ವರ್ಷದವಳಿರುವಾಗ ದೇಶದಲ್ಲಿ ತುರ್ತುಪರಿಸ್ಥಿತಯನ್ನು ಹೇರಲಾಗಿತ್ತು. ಅಂದು  ಡಾ.ಸ್ವಾಮಿ, ಜಾರ್ಜ್ ಫರ್ನಾಂಡೀಸ್ ನನ್ನ ಹೀರೋಗಳಾಗಿದ್ದು, ಸ್ವಾಮಿ ಅವರು ಏನೇ ಹೇಳಿದರೂ ಅವರ ಮಾತಿನ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಕಳೆದ ಏಪ್ರಿಲ್ ತಿಂಗಳನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ವಾಮಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಈ ವರ್ಷಾಂತ್ಯದಲ್ಲಿ ಆರಂಭವಾಗುತ್ತದೆ. ಮುಂದಿನ ವರ್ಷ ಎಲ್ಲಾ ಹಿಂದೂಗಳು ರಾಮನವಮಿಯನ್ನು ಆಯೋಧ್ಯೆಯಲ್ಲಿಯೇ ಆಚರಿಸಬಹುದು ಎಂದು ಹೇಳಿದ್ದರು.

ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆಂದು ಬಿಂಬಿಸಲಾಗುತ್ತಿದೆ. ಬಿಜೆಪಿ ಪ್ರಮುಖ ಅಜೆಂಡಾ ರಾಮಮಂದಿರ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯುತ್ತಿವೆ.

SCROLL FOR NEXT