ಲಖನೌ: 29 ಜನರನ್ನು ಬಲಿ ಪಡೆದುಕೊಂಡಿದ್ದ ಮಥುರಾ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ನ್ಯಾಯಾಮೂರ್ತಿ ಪಿ.ಸಿ ಘೋಷ್ ಮತ್ತು ಅಮಿತಾವ್ ರಾಯ್ ಅವರಿದ್ದ ಪೀಠ ಈ ಕುರಿತ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ದೆಹಲಿ ಬಿಜೆಪಿ ವಕ್ತಾರ ಹಾಗೂ ನ್ಯಾಯವಾದಿಯಾಗಿರುವ ಅಶ್ವಿನ್ ಉಪಾಧ್ಯಾಯ ಅವರು ಸಿಬಿಐ ತನಿಖೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ನಿಗದಿ ಪಡಿಸಿ ಆದೇಶಿಸಿತ್ತು.
ಇದರಂತೆ ಇಂದು ಆದೇಶ ಹೊರಡಿಸಿರುವ ಅಮಿತ್ ರಾಯ್ ಅವರಿದ್ದ ಪೀಠವು, ಪ್ರಕರಣವನ್ನು ಸಿಬಿಐಗೆ ವಹಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಮಾತ್ರ ಇದೆ, ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡ ಆದೇಶ ಹೊರಡಿಸುವಂತಿಲ್ಲ. ಸಿಬಿಐ ತನಿಖೆ ವಹಿಸುವಂತೆ ಆಗ್ರಹಿಸುವುದು ದಿನಚರಿಯಾಗಬಾರದು ಎಂದು ಹೇಳಿದೆ.
ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಅರ್ಜಿದಾರ ಉತ್ತರ ಪ್ರದೇಶ ತನಿಖೆಯಲ್ಲಿ ವಿಫಲತೆ ಕಂಡಿರುವುದಾಗಿ ಅಥವಾ ಕೆಲಸ ಮಾಡದಿರುವ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದೆ.