ದೇಶ

ಎನ್‌ಜಿಒದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮಹಿಳೆ ಕಾಬುಲ್'ನಲ್ಲಿ ನಾಪತ್ತೆ

Manjula VN

ನವದೆಹಲಿ: ವಿದೇಶದಲ್ಲಿ ಎನ್‌ಜಿಒದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮಹಿಳೆ ಜುಡಿತ್ ಡಿಸೋಜ ಅವರು ಆಫ್ಘಾನಿಸ್ತಾನದ ಕಾಬುಲ್ ನಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಡಿಸೋಜ (40) ಅವರು ಅಂತರಾಷ್ಟ್ರೀಯ ಎನ್‌ಜಿಒ ಆಗಿರುವ ಅಘಾ ಖಾನ್ ನೆಟ್ ವರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿಯಿಂದ ಡಿಸೋಜ ಅವರು ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.

ಭಾರತೀಯ ರಾಯಭಾರಿ ಕಚೇರಿ ಡಿಸೋಜ ಅವರನ್ನು ಹುಡುಕುವ ಪ್ರಯತ್ನದಲ್ಲಿದ್ದು, ಅಫ್ಘಾನ್ ಆಡಳಿತ ಮಂಡಳಿಯೊಂದಿಗೆ ಹಾಗೂ ಕೋಲ್ತತಾದಲ್ಲಿರುವ ಡಿಸೋಜ ಕುಟುಂಬಸ್ಥರೊಂದಿಗೆ ನಿರಂತರವಾಗಿ ಸಂಪರ್ಕ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳಷ್ಟೇ ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿತ್ತು. ಅಫ್ಘಾನಿಸ್ತಾನಕ್ಕೆ ಹೋಗುತ್ತಿರುವ ಹಾಗೂ ನೆಲೆಯೂರಿರುವ ಭಾರತೀಯರು ಭದ್ರತೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಅಫ್ಘಾನಿಸ್ತಾನದಲ್ಲಿ ಭದ್ರತೆ ಅಸ್ಥಿರಗೊಂಡಿದ್ದು, ಭಯೋತ್ಪಾದಕರು ಮತ್ತೆ ದಾಳಿ ಮಾಡುವ ಸಂಭವವಿದೆ. ವಿದೇಶಿಗರನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಳ್ಳುವ ಮಾಹಿತಿಗಳು ಬಂದಿದ್ದು, ಎಚ್ಚರದಿಂದ ಇರಬೇಕೆಂದು ಹೇಳಿತ್ತು. ಇದರ ಮಧ್ಯೆಯೇ ಇದೀಗ ಡಿಸೋಜ ಅವರು ನಾಪತ್ತೆಯಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

SCROLL FOR NEXT