ದೇಶ

ಮೋದಿಯವರಿಗೆ ಭಟ್ಟಂಗಿಗಳ ಅಗತ್ಯವಿಲ್ಲ: ರವಿಶಂಕರ ಪ್ರಸಾದ್

Sumana Upadhyaya

ಮುಂಬೈ: ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ ಮುಖ್ಯಸ್ಥ ಪಹ್ಲಾಜ್ ನಿಹಲಾನಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರವಿಶಂಕರ ಪ್ರಸಾದ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಭಟ್ಟಂಗಿಗಳು ಅಥವಾ ಹೊಗಳುಭಟರ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಉಡ್ತಾ ಪಂಜಾಬ್ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದಕ್ಕಾಗಿ ಕೇಳಿಬರುತ್ತಿರುವ ವ್ಯಾಪಕ ಟೀಕೆಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಈ ಮುನ್ನ ಪ್ರತಿಕ್ರಿಯೆ ನೀಡಿದ್ದ ನಿಹಲಾನಿ, ''ಹೌದು, ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದಂತೆ ನಾನು ನರೇಂದ್ರ ಮೋದಿಯವರ ಚಮಚ. ಮೋದಿಯವರ ಚಮಚನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಮತ್ತೇನು ನಾನು ಇಟೆಲಿಯ ಪ್ರಧಾನಿಗೆ ಚಮಚನಾಗಿರಬೇಕೆ ಎಂದು ಕೇಳಿದ್ದರು.

ಪಹ್ಲಾಜ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಇಂತಹ ಹೇಳಿಕೆ ನೀಡಬಾರದು. ನಮ್ಮ ಪ್ರಧಾನಿಗಳು ತಮ್ಮನ್ನು ಪ್ರಧಾನ್ ಸೇವಕ್ (ಜನಗಳ ಸೇವೆ ಮಾಡುವವರು) ಎಂದು ಸಂಬೋಧಿಸಿಕೊಳ್ಳುತ್ತಾರೆ. ಪ್ರಧಾನ ಸೇವಕನಾದವನಿಗೆ ಹೊಗಳುಭಟರ, ಭಟ್ಟಂಗಿಗಳ ಅಗತ್ಯವಿಲ್ಲ ಎಂದರು.

ಬಿಜೆಪಿ ಬೆಂಬಲಿಗ ಎಂದು ಗುರುತಿಸಿಕೊಂಡಿರುವ ಪಹ್ಲಾಜ್ ನಿಹಲಾನಿ, ಡ್ರಗ್ ಮಾಫಿಯಾ ಬಗ್ಗೆ ಚಿತ್ರದಲ್ಲಿರುವುದರಿಂದ ಮುಂದಿನ ವರ್ಷ ಪಂಜಾಬ್ ನಲ್ಲಿ ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ಮೇಲೆ ಯಾವುದೇ ಪ್ರಭಾವ ಬೀರಬಾರದು ರಾಜಕೀಯ ಒತ್ತಡಕ್ಕೊಳಗಾಗಿ ಚಿತ್ರಕ್ಕೆ ಕತ್ತರಿ ಹಾಕಿದ್ದಾರೆ ಎಂಬುದು ಆಪ್ ಮತ್ತು ಕಾಂಗ್ರೆಸ್ ಪಕ್ಷಗಳ ಆರೋಪ.

SCROLL FOR NEXT