ದೇಶ

ಐಎನ್ ಎಸ್ ವಿಕ್ರಮಾದಿತ್ಯದಲ್ಲಿ ವಿಷಾನಿಲ ಸೋರಿಕೆ: ಇಬ್ಬರ ಸಾವು

Srinivasamurthy VN

ಕಾರವಾರ: ಭಾರತದ ನೌಕಾ ಪಡೆಯ ಅತ್ಯಂತ ದುಬಾರಿ ಹಾಗೂ ಬೃಹತ್ ಗಾತ್ರದ ಸಮರ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಐಎನ್‌ಎಸ್ ವಿಕ್ರಮಾದಿತ್ಯ ಸಮರ ನೌಕೆಯ ಕೆಳ  ಅಂತಸ್ತಿನಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆ ಪರಿಣಾಮ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್ ಎಸ್ ವಿಕ್ರಮಾಧಿತ್ಯ ಸಮರ ನೌಕೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ನೌಕೆಯ ಕೆಳ ಅಂತಸ್ತಿನ ಭಾಗದಲ್ಲಿದ್ದ ಎಸ್‌ಟಿಪಿ (ಶೌಚಗೃಹದ ತ್ಯಾಜ್ಯ)  ಟ್ಯಾಂಕ್ ಸ್ವಚ್ಚ ಮಾಡುವ ಸಲುವಾಗಿ ವೆಲ್ಡಿಂಗ್ ಕಾರ್ಯ ಮಾಡುವ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ವಿಷಾನಿಲ ಸೋರಿಕೆಯಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ನೌಕರರು  ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಕಾರವಾರದ ನೌಕಾಪಡೆಯ ಐಎನ್ ಎಸ್ ಪತಂಜಲಿ ನೌಕಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾ  ಮೂಲಗಳು ತಿಳಿಸಿವೆ.

ರಾಯಲ್ ಮೆರೀನ್ ಎಂಬ ಹಡಗು ದುರಸ್ತಿ ಸಂಸ್ಥೆಯು ಈ ದುರಸ್ತಿ ಕಾರ್ಯಗ ಮೇಲುಸ್ತುವಾರಿ ನೋಡುಕೊಳ್ಳುತ್ತಿದ್ದು, ಮೃತರನ್ನು ಸಂಸ್ಥೆಯ ಉದ್ಯೋಗಿಗಳಾದ ಪಾಟ್ನಾ ಮೂಲದ ರಾಕೇಶ್  ಕುಮಾರ್ (29) ಹಾಗೂ ಕಾರವಾರ ಮುದಗಾದ ಮೋಹನದಾ ಕೊಳಂಬಕರ್ (28) ಎಂದು ಗುರುತಿಸಲಾಗಿದೆ.

ರಷ್ಯಾ ನಿರ್ಮಿತ 45,400 ಟನ್ ಭಾರದ, 20 ಮಹಡಿಗಳನ್ನು ಹೊಂದಿರುವ ಐಎನ್ ಎಸ್ ವಿಕ್ರಮಾಧಿತ್ಯ ಸಮರ ನೌಕೆಯನ್ನು 1,507.51 ಕೋಟಿ ರು. ನೀಡಿ ಖರೀದಿಸಲಾಗಿತ್ತು. ನೌಕೆ ಜೂನ್  1ರಂದು ವಾರ್ಷಿಕ ನಿರ್ವಹಣೆ ಹಾಗೂ ದುರಸ್ತಿ ಕಾರ್ಯಕ್ಕಾಗಿ ಕಾರವಾರ ಕದಂಬ ನೌಕಾನೆಲೆಗೆ ಆಗಮಸಿದೆ.  ಅಡ್ಮಿರಲ್ ಗೋರ್‌ಸ್ಕೋವ್ ಎಂಬ ಮೂಲನಾಮ ಹೊಂದಿರುವ ರಷ್ಯಾ ನಿರ್ಮಿತ ಈ  ನೌಕೆಯ ಕೆಳಮಹಡಿಯಲ್ಲಿದ್ದ ಎಸ್‌ಟಿಪಿ (ಶೌಚಗೃಹದ ತ್ಯಾಜ್ಯ) ಟ್ಯಾಂಕ್ ಸ್ವಚ್ಛ ಮಾಡಲು ಸಂಜೆ 5 ಗಂಟೆಗೆ ಕಾರ್ಮಿಕರು ತೆರಳಿದ್ದರು. ತ್ಯಾಜ್ಯ ನೀರಿನ ಸೋರಿಕೆ ಹಾಗೂ ಹೈಡ್ರೋಜನ್ ಸಲೈಡ್  ಅನಿಲ ಸೋರಿಕೆ ತಡೆಯುವುದು ಇವರ ಉದ್ದೇಶವಾಗಿತ್ತು.

ಆದರೆ, ಇಕ್ಕಟ್ಟಿನ ಸ್ಥಳದಲ್ಲಿ ವೆಲ್ಡಿಂಗ್ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ವಿಷಪೂರಿತ ಹೈಡ್ರೋಜನ್ ಸಲೈಡ್ ಅನಿಲ ಸೋರಿಕೆಯಾಗಿ   ಕಾರ್ಮಿಕರು ಅಸ್ವಸ್ಥಗೊಂಡರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣದ ತನಿಖೆಗೆ ನೌಕಾಪಡೆ ಆದೇಶ ಹೊರಡಿಸಿದೆ.

SCROLL FOR NEXT