ನವದೆಹಲಿ: ಎಲ್ಲಾ ರಾಜ್ಯಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನ್ಯಾಯೋಚಿತ ಮತ್ತು ನ್ಯಾಯಸಮ್ಮತವಾಗಿ ಶಿಕ್ಷಕರನ್ನು ನೇಮಕಾತಿ ಮಾಡಬೇಕೆಂದು ಕರಡು ಶಿಕ್ಷಣ ನೀತಿಯಡಿ ಟಿಎಸ್ಆರ್ ಸುಬ್ರಹ್ಮಣ್ಯನ್ ಸಮಿತಿ ವರದಿ ಶಿಫಾರಸು ಮಾಡಿದೆ.
ಯಾವ ಬ್ಲಾಕ್ ನಲ್ಲಿ ಎಷ್ಟು ಶಿಕ್ಷಕರ ಹುದ್ದೆ ಖಾಲಿಯಿದೆ ಎಂದು ಸಾರ್ವಜನಿಕರಿಗೆ ಸುಲಭವಾಗಿ ಗೊತ್ತಾಗುವ ರೀತಿಯಲ್ಲಿ ಹಾಕಬೇಕು. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಕಡಿಮೆ ಅವಧಿಯವರೆಗೆ ಸೇವೆ ಮತ್ತು ಇತರ ಭತ್ಯೆ ಸೌಲಭ್ಯಗಳನ್ನು ಒದಗಿಸಬೇಕು. ಇದಲ್ಲದೆ ಬಿ.ಎಡ್ ಕೋರ್ಸ್ ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇಕಡಾ 50ರಷ್ಟು ಅಂಕ ಗಳಿಸಿರಬೇಕು ಮತ್ತು ಶಿಕ್ಷಕರ ನೇಮಕಾತಿಗೆ ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಕೂಡ ವರದಿ ಹೇಳಿದೆ.
ಉನ್ನತ ಶಿಕ್ಷಣಕ್ಕೆ ಪ್ರತಿವರ್ಷ 10 ಲಕ್ಷ ಹೊಸ ಫೆಲೋಶಿಪ್ ನೀಡಲು ಕೂಡ ವರದಿಯಲ್ಲಿ ಶಿಫಾರಸು ಮಾಡಿದೆ. 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಆಧರಿಸಿ ರಾಷ್ಟ್ರೀಯ ಮಟ್ಟದಲ್ಲಿ ಫೆ ಲೋಶಿಪ್ ಗೆ ಆಯ್ಕೆ ಮಾಡಬೇಕು. ವಿಶ್ವವಿದ್ಯಾಲಯದ ಅಡಿಯಲ್ಲಿ 100ಕ್ಕಿಂತ ಹೆಚ್ಚು ಕಾಲೇಜುಗಳು ಇರಬಾರದು, ಒಂದು ವೇಳೆ ಇದ್ದರೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಮತ್ತು ಮ್ಯಾನೇಜ್ ಮೆಂಟ್ ನ ದಕ್ಷತೆಯ ಆಡಳಿತಕ್ಕೆ ಅವುಗಳನ್ನು ಭಾಗ ಮಾಡಬೇಕು ಎಂದು ಕೂಡ ಸಮಿತಿ ಹೇಳಿದೆ.
ವಿದ್ಯಾರ್ಜನೆಗಾಗಿ ವಿದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನಾಗಿ ಮಾಡಲು ಕನಿಷ್ಠ ಸಾವಿರ ಸಂಸ್ಥೆಗಳನ್ನು ಪರಿವರ್ತನೆ ಮಾಡಬೇಕು. ಇನ್ನು ಕ್ಯಾಂಪಸ್ ರಾಜಕೀಯದ ಬಗ್ಗೆ ಪ್ರಸ್ತಾಪಿಸಿರುವ ಟಿಎಸ್ ಆರ್ ಸಮಿತಿ, ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳನ್ನು ಗುರುತಿಸಬೇಕು ಎಂದು ಸುಬ್ರಹ್ಮಣ್ಯನ್ ಸಮಿತಿ ಶಿಫಾರಸು ಮಾಡಿದೆ.