ನವದೆಹಲಿ: ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ರಘುರಾಮ್ ರಾಜನ್ ಕಾಂಗ್ರೆಸ್ ನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಘುರಾಮ್ ರಾಜನ್ ಅವರ ವಿರುದ್ಧ ಬಿಜೆಪಿ ನಡೆಸುತ್ತಿರುವ ವಾಗ್ದಾಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್, ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನವಿದೆ ಎಂದು ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಈ ರೀತಿಯ ಹೇಳಿಕೆಗಳು ರಘು ರಾಮ್ ರಾಜನ್ ಅವರು ಕಾಂಗ್ರೆಸ್ ನ ಏಜೆಂಟ್ ಎಂಬುದನ್ನು ಮತ್ತಷ್ಟು ಸಾಬೀತುಪಡಿಸುತ್ತದೆ ಎಂದಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಈ ರೀತಿಯ ಹೇಳಿಕೆಗಳು ನಾನು ರಘು ರಾಮ್ ರಾಜನ್ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಶಂಕಿಸಿದ್ದನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಇತ್ತೀಚಿನ ದಿನಗಳಲ್ಲಿ ವಾಗ್ದಾಳಿ ನಡೆಸುತ್ತಿದ್ದು, ರಘುರಾಮ್ ರಾಜನ್ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ.