ಕೊಚ್ಚಿ: ಬ್ರಿಟನ್ (ಯುಕೆ) ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರದಿಂದ ಉಂಟಾಗಲಿರುವ ಆರ್ಥಿಕ-ಸಾಮಾಜಿಕ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತೀಯರ ಉದ್ಯೋಗ ದೃಷ್ಟಿಯಿಂದ ಯುಕೆ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವುದರಿಂದ ಒಳಿತಾಗಲಿದೆ ಎಂದು ಹೇಳಲಾಗುತ್ತಿದೆ.
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ಬಂದ ನಂತರ ಬ್ರಿಟನ್ ನಲ್ಲಿ ಇಂಗ್ಲಿಷ್ ಪ್ರಾಧಾನ್ಯತೆ ಮತ್ತಷ್ಟು ಹೆಚ್ಚಿದ್ದು, ಯುರೋಪಿಯನ್ ಒಕ್ಕೂಟದಲ್ಲಿ ಇಂಗ್ಲಿಷ್ ಗೆ ಪ್ರಾಧಾನ್ಯತೆ ನೀಡದ ಇತರ ದೇಶಗಳಿಗಿಂತ ಇಂಗ್ಲಿಷ್ ಮಾತನಾಡುವ ಭಾರತೀಯರಿಗೆ ಬ್ರಿಟನ್ ನಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬ್ರಿಟನ್ ನಲ್ಲಿ ಮೈಕ್ರೋಸಾಫ್ಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜೇಮ್ಸ್ ಜೋಸೆಫ್ ಎಂಬುವವರು ಈ ಬಗ್ಗೆ ಮಾತನಾಡಿದ್ದು, ಬ್ರಿಟನ್ ನ ಆರೋಗ್ಯ, ಐಟಿ ಕ್ಷೇತ್ರಗಳಲ್ಲಿ ಕೆಲಸಕ್ಕಾಗಿ ಎದುರುನೋಡುತ್ತಿರುವ ಭಾರತೀಯರಿಗೆ ಯುರೋಪಿಯನ್ ಒಕ್ಕೂಟದ ಇತರ ದೇಶಗಳ ನಾಗರೀಕರಿಗಿಂತ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಹೇಳಿದ್ದಾರೆ. ಬ್ರಿಟನ್ ನಲ್ಲಿ ಭಾರತೀಯರಿಗೆ ಉದ್ಯೋಗ ಅವಕಾಶಗಳು ಹೇರಳವಾಗಿ ಸಿಗಲಿವೆಯಾದರೂ, ಬ್ರಿಟನ್ ನ ಕರೆನ್ಸಿ ಪೌಂಡ್ ನ ಮೌಲ್ಯ ಕುಸಿತವಾಗಿರುವುದರ ಪರಿಣಾಮ ಕಡಿಮೆ ವೇತನ ಸಿಗಲಿದೆ ಎಂಬುದು ಗಾಮನಾರ್ಹ ವಿಷಯವಾಗಿದೆ. ಬ್ರಿಟನ್ ನಿಂದ ಅತಿ ಹೆಚ್ಚು ವೀಸಾ ಪಡೆಯುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು 2015 ರಲ್ಲಿ ಸುಮಾರು 60,000 ಕ್ಕೂ ಹೆಚ್ಚು ಉದ್ಯೋಗ ವೀಸಾಗಳನ್ನು ಪಡೆದಿದೆ ಎಂದು ವರದಿಯೊಂದರ ಮೂಲಕ ತಿಳಿದುಬಂದಿದೆ. ಪ್ರಾರಂಭದ ಹಂತದಲ್ಲಿ ಬ್ರೆಕ್ಸಿಟ್ ನಿಂದ ಭಾರತೀಯರ ಉದ್ಯೋಗ ಅವಕಾಶಗಳು ಉತ್ತಮವಾಗಿರಲಿದೆಯಾದರೂ, ಬ್ರೆಕ್ಸಿಟ್ ಪರವಾಗಿ ಚಲಾವಣೆಯಾದ ಮತಗಳು ವಲಸೆ ವಿರುದ್ಧವಾಗಿದ್ದ ಕಾರಣ, ದೀರ್ಘಾವಧಿಯಲ್ಲಿ ಇದರಿಂದ ಭಾರತೀಯರಿಗೆ ಒಳಿತಾಗುವುದಿಲ್ಲ ಎಂಬ ಎಚ್ಚರಿಕೆ ಇರಬೇಕು ಎಂದು ಜಿಯೋಜಿತ್ ಬಿ.ಎನ್.ಪಿ. ಪರೀಬಸ್ ನ ಹೂಡಿಕೆ ತಜ್ಞ ವಿಕೆ ವಿಜಯ್ ಕುಮಾರ್ ವಿಶ್ಲೇಷಿಸಿದ್ದಾರೆ. ವಲಸೆ ಸಮಸ್ಯೆ ಇಲ್ಲದ ಬ್ರಿಟನ್ ನ ಉತ್ತರ ಐರ್ಲೆಂಡ್, ಸ್ಕಾಟ್ಲೆಂಡ್ ಬ್ರೆಕ್ಸಿಟ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರೆ, ವಲಸೆ ಸಮಸ್ಯೆಗಳನ್ನು ಎದುರಿಸುತ್ತಿರುವ ಬ್ರಿಟನ್ ನ ಪ್ರದೇಶಗಳು ಬ್ರೆಕ್ಸಿಟ್ ಪರವಾಗಿ ಮತ ಚಲಾವಣೆ ಮಾಡಿದ್ದವು.