ನವದೆಹಲಿ: ಪ್ಯಾಂಪೋರ್ ಬಳಿ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು 8 ಯೋಧರ ಕೊಂದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸೇನಾ ಬೆಂಗಾವಲು ವಾಹನಗಳಿಗೆ ಲೋಹದ ಪ್ಲೇಟ್ ಅಳವಡಿಸುವಂತೆ ರಕ್ಷಣಾ ಇಲಾಖೆಗೆ ಸೂಚಿಸಿದೆ.
ಗಡಿಗಳಲ್ಲಿ ಉಗ್ರರಿಂದ ಮತ್ತು ಶತ್ರು ರಾಷ್ಟ್ರದ ಸೈನಿಕರ ದಾಳಿಯನ್ನು ತಮ್ಮ ಎದೆಕೊಟ್ಟು ರಕ್ಷಣೆಗೆ ನಿಲ್ಲುವ ಸೈನಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಸೇನಾ ಭದ್ರತಾ ವಾಹನಗಳಿಗೆ ವಿಶೇಷ ಹೆಚ್ಚುವರಿ ಮೆಟಲ್ ಪ್ಲೇಟ್ ಅಳವಡಿಕೆ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ರಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದೆ. ಇನ್ನು ಯೋಧರಿಗೆ ಬುಲೆಟ್ ಪ್ರೂಫ್ ವಾಹನ ನೀಡಿಕೆ ಕುರಿತಂತೆ ಕೇಂದ್ರ ಗೃಹ ಇಲಾಖೆ ಪ್ರಸ್ತಾಪ ಮುಂದಿಟ್ಟಿತ್ತಾದರೂ ಗಡಿ ಭಾಗದ ಕಣಿವೆಯ ರಸ್ತೆಗಳಲ್ಲಿ ದುಬಾರಿ ಬುಲೆಟ್ ಪ್ರೂಫ್ ವಾಹನಗಳನ್ನು ಚಲಾಯಿಸುವುದು ದುಸ್ತರ ಮತ್ತು ಈ ವಾಹನಗಳು ವೇಗವಾಗಿ ಚಲಿಸುವುದಿಲ್ಲ ಎಂಬ ತಜ್ಞರ ಅಭಿಪ್ರಾಯದಂತೆ ಪ್ರಸ್ತುತ ಇರುವ ವಾಹನಗಳಿಗೇ ಲೋಹದ ಶೀಲ್ಡ್ ಅಳವಡಿಸಲು ಸೂಚನೆ ನೀಡಲಾಗಿದೆ.
ಅಲ್ಲದೆ ಯೋಧರು ಕೂರುವ ಆಸನಗಳನ್ನು ದಾಳಿ ಸಂದರ್ಭದಲ್ಲಿ ಅವರ ಶೀಲ್ಡ್ ಗಳಾಗಿ ಮಾರ್ಪಡಿಸುವ ರೀತಿಯಲ್ಲಿ ವಿನ್ಯಾಸ ಗೊಳಿಸುವಂತೆ ಹೇಳಲಾಗಿದೆ.
2 ನಿಮಿಷಗಳಲ್ಲಿ 200 ಸುತ್ತು ಗುಂಡು ಹಾರಿಸಿದ ಉಗ್ರರು!
ಇನ್ನು ಜಮ್ಮು-ಕಾಶ್ಮೀರದ ಪಂಪೊರ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಭಯೋತ್ಪಾದನಾ ದಾಳಿ ವೇಳೆ ಭದ್ರತಾ ಸಿಬ್ಬಂದಿಗಳ ವಾಹನದ ಮೇಲೆ 200 ಸುತ್ತು ಗುಂಡಿ ಹಾರಿಲಾಗಿತ್ತು ಎಂಬ ಮಾಹಿತಿಯನ್ನು ಸಿಆರ್‌ಪಿಎಫ್ ಡಿ.ಜಿ. ದುರ್ಗಾಪ್ರಸಾದ್ ತಿಳಿಸಿದ್ದಾರೆ. ಯೋಧರನ್ನು ಕೊಲ್ಲುವ ಉದ್ದೇಶದಿಂದಲೇ ಈ ದಾಳಿ ಮಾಡಲಾಗಿದ್ದು, ದಾಳಿಗೆ ಭದ್ರತಾ ಸಿಬ್ಬಂದಿ ವೈಫಲ್ಯ ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.