ಗುರಂಗಾವ್: ಗೋ ರಕ್ಷಾ ದಳದ ಕಾರ್ಯಕರ್ತರು ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ಹಿಡಿದ ಅವರನ್ನು ಚನ್ನಾಗಿ ಥಳಿಸಿ ಗೋ ಮೂತ್ರ, ಸಗಣಿ ತಿನ್ನಿಸಿರುವ ಘಟನೆ ಗುರಂಗಾವ್ ನಲ್ಲಿ ನಡೆದಿದೆ.
ಕಾರಿನಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಗೋ ರಕ್ಷಾ ದಳದ ಕಾರ್ಯಕರ್ತರು ಫರಿದಾಬಾದ್ ಬಳಿ ಅವರನ್ನು ತಡೆದು ಅವರನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋ ಮಾಂಸ ಸಾಗಿಸುತ್ತಿದ್ದವರಿಗೆ ಸಗಣಿ, ಗೋ ಮೂತ್ರ ಕುಡಿಸಿದ್ದನ್ನು ವ್ಯಕ್ತಿಯೊರ್ವ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗೋ ರಕ್ಷಾ ದಳದ ಮುಖ್ಯಸ್ಥ ಧರ್ಮೇಂದ್ರ ಯಾದವ್, ಗೋವು ಹಿಂದೂಗಳ ತಾಯಿ ಇದ್ದಂತೆ. ನನ್ನ ತಾಯಿ ಮೇಲೆ ಯಾರಾದರೂ ದಾಳಿ ಮಾಡಿದರೆ ನಾನು ಪೊಲೀಸರಿಗಾಗಿ ಕಾದು ಕುಳಿತುಕೊಳ್ಳಬೇಕೆ. ಹೀಗಾಗಿ ಗೋ ಮಾಂಸ ಸಾಗಾಣೆ ಮಾಡುತ್ತಿದ್ದವರಿಗೆ ತಕ್ಕ ಶಾಸ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಿದ್ದರು ಇವರು ಗೋ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಾ ಕಾನೂನು ಉಲ್ಲಂಘಿಸಿದ್ದಾರೆ. ಅದೇ ರೀತಿ ನಮ್ಮ ನಂಬಿಕೆಗಳ ಮೇಲೆ ಯಾರಾದರೂ ದಾಳಿ ಮಾಡಿದರೆ ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತೇವೆ ಎಂದು ಧರ್ಮೇಂದ್ರ ಯಾದವ್ ಹೇಳಿದ್ದಾರೆ.