ದೇಶ

ಅತ್ಯಾಚಾರ ಹೇಳಿಕೆ: ನಟ ಸಲ್ಮಾನ್ ಗೆ ಸಮನ್ಸ್ ಜಾರಿ ಮಾಡಲಿರುವ ಎನ್'ಸಿಡಬ್ಲ್ಯೂ

Manjula VN

ಗುವಾಹಟಿ: ಅತ್ಯಾಚಾರ ಕುರಿತಂತೆ ಹೇಳಿಕೆ ನೀಡಿದ ತೀವ್ರ ವಿವಾದಕ್ಕೆ ಕಾರಣರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಲಲಿತಾ ಕುಮಾರಮಂಗಲಂ ಅವರು ಹೇಳಿದ್ದಾರೆ.

ಈ ಕುರಿತಂತೆ ಗುವಾಹಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಟ ಸಲ್ಮಾನ್ ಖಾನ್ ಅವರ ಅತ್ಯಾಚಾರ ಹೇಳಿಕೆಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಹೇಳಿಕೆ ಸಂಬಂಧ ಸಲ್ಮಾನ್ ಅವರು ಕೂಡಲೇ ಕ್ಷಮೆಯಾಚಿಸಬೇಕು. ಅಲ್ಲದೆ, ಸ್ಪಷ್ಟನೆ ನೀಡುವಂತೆ ಶೀಘ್ರದಲ್ಲೇ ಆಯೋಗ ಸಮನ್ಸ್ ಜಾರಿ ಮಾಡಲಿದೆ ಎಂದು ಹೇಳಿದ್ದಾರೆ,

ಇದೇ ವೇಳೆ ಬಿಹಾರದ ಮೋತಿಹಾರ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿರುವ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಲು ರಾಜಕೀಯ ವ್ಯವಸ್ಥೆಯೇ ಕಾರಣವಾಗಿದೆ. ಪರಿಸ್ಥಿತಿ ಅವಲೋಕಿಸಲು ಆಯೋಗ ಶೀಘ್ರದಲ್ಲೇ ಬಿಹಾರಕ್ಕೆ ಭೇಟಿ ನೀಡಲಿದೆ. ಪ್ರಕರಣವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದಿದ್ದಾರೆ.

ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್ ಅವರು ಸುಲ್ತಾನ್ ಚಿತ್ರದ ಕುರಿತಂತೆ ಮಾತನಾಡಿದ್ದರು. ಚಿತ್ರೀಕರಣದಲ್ಲಿ ತಮ್ಮ ಪರಿಶ್ರಮವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ಅವರು, ಕುಸ್ತು ಪಟುವಾಗಿ ನಟಿಸಿದ್ದ ಸಮಯದಲ್ಲಿ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಕೆ ಮಾಡಿಕೊಂಡಿದ್ದರು.

ಕುಸ್ತಿ ಶೂಟ್ ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತೆಂದರೆ ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ಸ್ಥಿತಿಯಷ್ಟು ದುರ್ಬಲವಾಗಿತ್ತು. ಶೋಚನೀಯವಾಗಿತ್ತು. ರಿಂಗ್ ನಿಂದ ನನಗೆ ಹೊರಗೆ ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗದಷ್ಟು ನೋವು, ದೌರ್ಬಲ್ಯ ನನ್ನನ್ನು ಕಾಡುತ್ತಿತ್ತು ಎಂದು ಹೇಳಿದ್ದರು.

SCROLL FOR NEXT