ಸೇಲಂ: ಕಿಡಿಗೇಡಿಗಳು ಫೇಸ್‌ಬುಕ್‌ನ ಅಕೌಂಟ್ ಗೆ ಅಪ್‌ಲೋಡ್ ಮಾಡಿದ್ದ ತಿರುಚಿದ ನಗ್ನ ಚಿತ್ರ ಕಂಡು 21 ವರ್ಷ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೇಲಂ ನಲ್ಲಿ ನಡೆದಿದೆ
ಮೃತ ಯುವತಿಯನ್ನು ಸೇಲಂ ಜಿಲ್ಲೆಯ ಎಲಂಪಿಳ್ಳೈ ಮೂಲದ ಎ.ವಿನುಪ್ರಿಯಾ ಎಂದು ಗುರುತಿಸಲಾಗಿದೆ. ಬಿಎಸ್ಸಿ ಮುಗಿಸಿದ್ದ ವಿನುಪ್ರಿಯಾ ಸರ್ಕಾರಿ ಉದ್ಯೋಗ ಸೇರಲಿದ್ದರು. ಯುವತಿ ತಂದೆ ಅಣ್ಣಾದೊರೈ (50) ನೇಯ್ಗೆ ಕೆಲಸ ಮಾಡುತ್ತಾರೆ.
ಈ ಕೆಟ್ಟ ಪರಿಸ್ಥಿತಿ ನಿಭಾಯಿಸಲಾಗುತ್ತಿಲ್ಲ. ಪೋಷಕರು ನನ್ನನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಫೇಸ್‌ಬುಕ್ ಫೋಟೊ ನಿಜ ಎಂದು ಎಲ್ಲರೂ ಅನುಮಾನಿಸುತ್ತಿದ್ದಾರೆ ಎಂದು ಆಕೆಯ ಕೊಠಡಿಯಲ್ಲಿ ಲಭ್ಯವಾದ ಪತ್ರದಲ್ಲಿ ಬರೆಯಲಾಗಿದೆ
ಫೇಸ್‌ಬುಕ್‌ನಲ್ಲಿ ಆಕೆಯ ಅರೆನಗ್ನ ಚಿತ್ರ ಇರುವುದಾಗಿ ಸ್ನೇಹಿತರು ತಿಳಿಸಿದಾಗ ವಿನುಪ್ರಿಯಾಗೆ ಆಘಾತವಾಗಿತ್ತು. ಅಣ್ಣಾದೊರೈ ಜೂನ್ 23ರಂದು ಈ ಸಂಬಂಧ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಈ ಸಂಬಂಧ ಕ್ರಮ ಕೈಗೊಂಡಿರಲಿಲ್ಲ.
ಫೇಸ್‌ಬುಕ್‌ನಲ್ಲಿ ಭಾನುವಾರ ಮತ್ತೊಂದು ಅರೆ ನಗ್ನ ಚಿತ್ರ ಅಪ್‌ಲೋಡ್ ಆಗಿತ್ತು. ಅದನ್ನು ಯುವತಿಯ ತಂದೆಯ ಮೊಬೈಲ್‌ಗೆ ಕಳುಹಿಸಲಾಗಿತ್ತು. ಇದರಿಂದ ಬೇಸತ್ತ ವಿನುಪ್ರಿಯ, ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡಿದ್ದರು.
ವಿನುಪ್ರಿಯಾ ಸಾವಿಗೆ ಪೊಲೀಸರೇ ಕಾರಣ ಎಂದಿರುವ ಪೋಷಕರು ಆಕೆಯ ದೇಹವನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಮೃತ ದೇಹವನ್ನು ಸೇಲಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮೃತ ಯುವತಿಯ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.