ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಬುಧವಾರ ಈ ನಿರ್ಧಾರ ಕೈಗೊಳ್ಳಲಾಯಿತು.
ಕಳೆದ ಅಧಿವೇಶನಗಳಲ್ಲಿ ಮುಂದೂಡಿಕೊಂಡು ಬಂದಿದ್ದ ಎನ್ ಡಿಎ ಮೈತ್ರಿಕೂಟದ ಮಹಾತ್ವಾಕಾಂಕ್ಷಿ ಮಸೂದೆಯಾದ ಸರಕು ಮತ್ತು ಸೇವಾ ತೆರಿಗೆ ಮುಂಗಾರು ಅಧಿವೇಶನದಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ಮುಂಗಾರು ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ ಅಂಗೀಕಾರವಾಗುವ ನಿರೀಕ್ಷೆಯಿದೆ. ಅಗತ್ಯಬಿದ್ದರೆ ಎಲ್ಲಾ ಪಕ್ಷಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನೇಕ ಮಸೂದೆಗಳು ಅಂಗೀಕಾರವಾಗದೆ ಉಳಿದಿವೆ. ಮೂರು ವಿಧೇಯಕಗಳು ಕೂಡ ಬಾಕಿಯಿವೆ. ಇವುಗಳು ಕೂಡ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದರು.
ವರದಿಯೊಂದರ ಪ್ರಕಾರ, ರಾಜ್ಯಸಭೆಯಲ್ಲಿ 45 ಹಾಗೂ ಲೋಕಸಭೆಯಲ್ಲಿ 5 ಮಸೂದೆಗಳು ಅಂಗೀಕಾರವಾಗದೆ ಉಳಿದಿವೆ.ರಾಜ್ಯಸಭೆಯಲ್ಲಿ ಬಹಳ ಮುಖ್ಯವಾದ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಶಿಳ್ಳೆ ಹೊಡೆಯುವವರ ರಕ್ಷಣೆ(ತಿದ್ದುಪಡಿ) ಮಸೂದೆ, 2015 ಅಂಗೀಕಾರವಾಗದೆ ಉಳಿದಿರುವ ಮಸೂದೆಗಳಾಗಿವೆ.
ಇನ್ನು ಲೋಕಸಭೆಯಲ್ಲಿ ಗ್ರಾಹಕ ರಕ್ಷಣೆ ಮಸೂದೆ 2015, ಬೇನಾಮಿ ಸಾಗಾಟ(ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2015, ಶತ್ರು ಆಸ್ತಿ ಕಾಯ್ದೆಯ ತಿದ್ದುಪಡಿ ವಿಧೇಯಕ ಬದಲಾವಣೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ವಿಧೇಯಕವನ್ನು ಬದಲಾಯಿಸುವ ಮಸೂದೆಯನ್ನು ಅಂಗೀಕರಿಸುವ ಆಕಾಂಕ್ಷೆ, ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರವಿದೆ.
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷ ಎನ್ ಎಸ್ ಜಿ ವಿಚಾರ ಮತ್ತು ಆರ್ ಬಿಐ ಗವರ್ನರ್ ನೇಮಕ ಕುರಿತ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ಮೋದಿ ಸರ್ಕಾರ ಎರಡು ವರ್ಷ ಆಡಳಿತ ಪೂರೈಸಿದ ನಂತರ ನಡೆಯುತ್ತಿರುವ ಅಧಿವೇಶನ ಇದಾಗಿದೆ.
ಇತ್ತೀಚೆಗೆ ರಾಜ್ಯಸಭೆಯ 57 ಸ್ಥಾನಗಳಿಗೆ ನಡೆದ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್ ಡಿಎಯ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.