ಚೆನ್ನೈ: ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆಯಾದ ಗಂಟೆಗಳ ಬಳಿಕ ಅದೇ ನಿಲ್ದಾಣದಲ್ಲಿ ಹಿರಿಯ ನಾಗರೀಕರೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಚೈನ್ನೈನ ನುಂಗಂಬಾಕ್ಕಂ ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಎಸ್. ಸ್ವಾತಿ ಅವರನ್ನು ಧಾರುಣವಾಗಿ ಹತ್ಯೆ ಮಾಡಲಾಗಿತ್ತು. ಹಲ್ಲೆಗೊಳಗಾಗಿ ಸ್ವಾತಿ ನಿಲ್ದಾಣದಲ್ಲಿ ನರಳುತ್ತಿದ್ದರು. ಆಕೆಯ ಬಳಿ ಯಾರೊಬ್ಬರು ಬಂದಿರಲಿಲ್ಲ. ಇದೇ ನಿಲ್ದಾಣಕ್ಕೆ 72 ವರ್ಷದ ಹಿರಿಯ ನಾಗರಿಕ ಆದಿಕೇಶ್ವರನ್ ಎಂಬುವವರು ಬಂದಿದ್ದರು.
ಈ ವೇಳೆ ನಿಲ್ದಾಣದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಸ್ವಾತಿಯವರ ಮೃತದೇಹವನ್ನು ನೋಡಿದ್ದ ಆದಿಕೇಶ್ವರನ್ ಅವರಿಗೆ ಪ್ರಜ್ಞೆ ತಪ್ಪಿದೆ. ಇದರಂತೆ ನೆಲಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ಪರಿಣಾಮ ಆದಿಕೇಶ್ವರ್ ಅವರ ಹಲ್ಲು ಮುರಿದಿದೆ. ಹಿರಿಯ ನಾಗರಿಕರೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಅಲ್ಲಿನ ಜನತೆ ಮಾನವೀಯತೆ ಮರೆತಿದ್ದರು. ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರಿದ್ದರೂ ಯಾರೊಬ್ಬರೂ ಅವರ ನೆರವಿಗೆ ಬಂದಿಲ್ಲ. ಆದಿಕೇಶ್ವರನ್ ಅವರ ಹಲ್ಲು ಮುರಿದಿದ್ದರಿಂದ ಬಾಯಲ್ಲಿ ರಕ್ತ ಚಿಮ್ಮಿತ್ತು.
ಆದಿಕೇಶ್ವರನ್ ಅವರು ಚೂಲೈಮೆಡುವಿನ ಸೌರಾಷ್ಟ್ರ ನಗರದ ನಿವಾಸಿಯಾಗಿದ್ದು, ಪಾತ್ರೆಗಳ ತಯಾರಿಕೆ ಘಟಕವೊಂದರಲ್ಲಿ ಕಾರ್ಮಿಕನಾಗಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸ್ವಾತಿ ಹತ್ಯೆಯಾದ ದಿನ ಬೆಳಿಗ್ಗೆ 8.30ಕ್ಕೆ ನುಂಗಂಬಾಕ್ಕಂ ನಿಲ್ದಾಣಕ್ಕೆ ಬಂದಿದ್ದರು ಎಂದು ಆದಿಕೇಶ್ವರನ್ ಅವರ ಪುತ್ರ ಕೋತಂಡರಾಮನ್ ಅವರು ಹೇಳಿದ್ದಾರೆ,
9.20ರ ಸುಮಾರಿಗೆ ನನ್ನ ಸಹೋದರಿಯ ಕರೆ ಬಂದಿತ್ತು. ನಿಲ್ದಾಣದಲ್ಲಿ ಅಪ್ಪ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆಂದು ಹೇಳಿದ್ದರು. ನಿಲ್ದಾಣಕ್ಕೆ ಹೋದಾಗ ಸಾಕಷ್ಟು ಜನರು ನಿಂತಿದ್ದರು. ಈ ವೇಳೆ ಅಪ್ಪ ರೈಲಿಗೆ ಸಿಕ್ಕಿಹಾಕಿಕೊಂಡಿರಬೇಕು ಎಂದುಕೊಂಡಿದ್ದೆ. ಆದರೆ, ಅವರು ಪ್ರಜ್ಞೆ ತಪ್ಪಿಬಿದ್ದಿದ್ದಾರೆಂಬುದು ನಂತರವಷ್ಟೇ ತಿಳಿದಿತ್ತು.
ಮೃತ ದೇಹ ನೋಡಿದ್ದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೋಗಿದ್ದಾರೆ. ಈ ವೇಳೆ ಕುಳಿತುಕೊಳ್ಳಲು ಸಾಧ್ಯವಾಗದೆ ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿ ಪೊಲೀಸರು ಹಾಗೂ ರೈಲ್ವೆ ಇಲಾಖಾ ಅಧಿಕಾರಿಗಳು, ಸಾರ್ವಜನಿಕರಿದ್ದರೂ ಯಾರೊಬ್ಬರು ಅವರ ನೆರವಿಗೆ ಬಾರದಿರುವುದು ನಿಜಕ್ಕೂ ಬೇಸವನ್ನುಂಟು ಮಾಡಿದೆ. ಯಾರೊಬ್ಬರೂ ಅವರಿಗೆ ಪ್ರಾಥಮಿಕ ಚಿಕಿತ್ಸೆಯಾಗಲಿ, ನೀರಾಗಲಿ ನೀಡಿಲ್ಲ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದರು ಎಂದು ಕೋತಂಡರಾಮನ್ ಹೇಳಿಕೊಂಡಿದ್ದಾರೆ.