ನವದೆಹಲಿ: ನನ್ನ ವಿರುದ್ಧ ಸರಕಾರ ಯಾವುದನ್ನೂ ಸಾಬೀತುಪಡಿಸಲಾಗದು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.
ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ರಾಬರ್ಟ್ ವಾದ್ರಾ ನನ್ನ ವಿರುದ್ಧ ಹತ್ತಾರು ಸುಳ್ಳು ಕೇಸ್ಗಳಿವೆ. ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಯಾವುದನ್ನೂ ಸಾಬೀತು ಪಡಿಸಲು ಸರಕಾರದಿಂದ ಸಾಧ್ಯವಿಲ್ಲ ಎಂದು ರಾಬರ್ಟ್ ವಾದ್ರಾ ಬರೆದುಕೊಂಡಿದ್ದಾರೆ.
ರಿಯಾಲ್ಟಿ ಸಂಸ್ಥೆ ಡಿಎಲ್ಎಫ್ ಹಾಗೂ ವಾದ್ರ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ನಡುವಿನ ಒಪ್ಪಂದ ಸೇರಿದಂತೆ ಹರಿಯಾಣಾದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ನ್ಯಾ. ಎಸ್.ಎನ್ ದಿಂಗ್ರಾ ಸಮಿತಿ, ತನಿಖೆ ಪೂರ್ಣಗೊಂಡಿದೆ ಎಂದು ಘೋಷಿಸಿದ ಮರುದಿನ ವಾದ್ರಾ ಈ ಸ್ಟೇಟಸ್ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜಕೀಯ ಲಾಭಕ್ಕಾಗಿ ನನ್ನ ಹೆಸರು ಬಳಕೆ ಆಗಿದೆ. ನನ್ನ ವಿರುದ್ಧ ಸಲ್ಲದ ಆರೋಪಗಳಿಗೆ ಕಾಲ ಹಾಗೂ ಸತ್ಯ ಉತ್ತರ ನೀಡಲಿದೆ. ಯಾವುದೇ ಕಾರಣಕ್ಕೂ ತಲೆ ತಗ್ಗಿಸುವುದಿಲ್ಲ ಎಂದು ಬರೆದಿದ್ದಾರೆ.