ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮೃನಲ್ ಸೇನ್ ಅವರು ನಿಧನರಾಗಿದ್ದಾರೆ ಎಂಬ ವದಂತಿ ಟ್ವೀಟರ್ ನಲ್ಲಿ ವೈರಲ್ ಆಗಿದ್ದು, ಮೃನಲ್ ಸೇನ್ ಆರೋಗ್ಯವಾಗಿದ್ದಾರೆ ಇದು ಸುಳ್ಳು ಸುದ್ದಿ ಎಂದು ಕುಟುಂಬವರ್ಗ ಸ್ಪಷ್ಟನೆ ನೀಡಿದೆ.
94 ವರ್ಷದ ಮೃನಲ್ ಸೇನ್ ಅವರು ದೀರ್ಘಾವದಿ ಕಾಯಿಲೆಯಿಂದ ಬಳಲುತ್ತಿದ್ದು ಅವರಿಂದ ಮೊಬೈಲ್ ಫೋನ್ ನನ್ನು ದೂರವಿಡಲಾಗಿದೆ. ಆದರೆ ಅವರು ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಮೃನಲ್ ಸೇನ್ ನಿರ್ದೇಶನದ 1969ರಲ್ಲಿ ತೆರೆಗೆ ಬಂದ ಭುವನ್ ಸೋಮೆ ಹಾಗೂ 1984ರಲ್ಲಿ ಬಿಡುಗಡೆಯಾಗಿದ್ದ ಕಾಂದಹಾರ್ ಚಿತ್ರಗಳು ಭಾರತ ಚಿತ್ರರಂಗದ ಮೈಲುಗಲ್ಲು ಚಿತ್ರಗಳಾಗಿವೆ.
ಕಥೆಗಾರ ಅಮಿತವ್ ಘೋಷ್ ಅವರು ಮೃನಲ್ ಸೇನ್ ಅವರು ನಿಧನರಾಗಿದ್ದಾರೆ ಎಂಬ ಸಂದೇಶವನ್ನು ಟ್ವೀಟಿಸಿದ್ದು, ನಂತರ ಟ್ವೀಟರ್ ನಲ್ಲಿ ವೈರಲ್ ಆಗಿದೆ. ಇದರಿಂದ ಕಳೆದ ರಾತ್ರಿಯಿಂದ ಅಭಿಮಾನಿಗಳು ಹಾಗೂ ಹಿತೈಷಿಗಳು ದೂರವಾಣಿ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಹೀಗಾಗಿ ಕುಟುಂಬವರ್ಗ ಮೃನಲ್ ಸೇನ್ ಆರೋಗ್ಯವಾಗಿದ್ದು ಅವರ ನಿಧನ ವಾರ್ತೆ ವಂದತಿಯಾಗಿದ್ದು ಯಾರು ಇದನ್ನು ನಂಬಬೇಡಿ ಎಂದು ಮನವಿ ಮಾಡಿದೆ.
ಅತ್ಯುತ್ತಮ ನಿರ್ದೇಶನಕ್ಕಾಗಿ ಮೃನಲ್ ಸೇನ್ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಕೇಂದ್ರ ಸರ್ಕಾರ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.