ದೇಶ

ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣ: ಸಿಬಿಐ ತನಿಖೆಗೆ ಲೋಕಸಭೆಯಲ್ಲಿ ಆಗ್ರಹ

Lingaraj Badiger
ನವದೆಹಲಿ: ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರು ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣದಲ್ಲಿ ಭಾಗಿಯಾಗಿದ್ದು, 2ಜಿ ಹಗರಣಕ್ಕೂ ಇದಕ್ಕೂ ಸಂಬಂಧವಿದೆ ಎಂದು ಆರೋಪಿಸಿದ ಎಐಎಡಿಎಂಕೆ ಸದಸ್ಯರು, ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬುಧವಾರ ಲೋಕಸಭೆಯಲ್ಲಿ ಆಗ್ರಹಿಸಿದರು.
ಲೋಕಸಭೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಎಐಎಡಿಎಂಕೆಯ ಟಿ.ಜೆ. ವೆಂಕಟೇಶ್ ಅವರು, ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣಕ್ಕೆ ಶಂಬಂಧಿಸಿದಂತೆ ಡಿಎಂಕೆಯ ಮಾಜಿ ಸಚಿವರಿಬ್ಬರ ಹೆಸರು ಹಾಗೂ ಮಾಜಿ ವಿತ್ತ ಸಚಿವರ ಹೆಸರನ್ನು ಪ್ರಸ್ತಾಪಿಸಲು ಮುಂದಾದರು. ಆದರೆ ಇದಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅವಕಾಶ ನೀಡಲಿಲ್ಲ. 
ಇದೇ ವೇಳೆ ವೆಂಕಟೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣ ಹಾಗೂ 2ಜಿ ಹಗರಣ ಸೇರಿದಂತೆ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ನಿನ್ನೆಯೂ ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಎಐಎಡಿಎಂಕೆ ಸಂಸದರು ಕಾರ್ತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಕಾರಣ, 'ಕಾರ್ತಿ ಚಿದಂಬರಂ ವಿಶ್ವದ 14 ದೇಶಗಳಲ್ಲಿ ಬೃಹತ್‌ ಉದ್ದಿಮೆ ಸಾಮ್ರಾಜ್ಯ ಹೊಂದಿದ್ದಾರೆ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ' ಎಂದು ಆಂಗ್ಲದೈನಿಕವೊಂದು ಮಾಡಿದ್ದ ವರದಿ.
SCROLL FOR NEXT