ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ
ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಧ್ಯಮ ದೊರೆ ಪೀಟರ್ ಮುಖರ್ಜಿ ಒಂದು ಕಾಲದಲ್ಲಿ ಕೋಟ್ಯಂತರ ರುಪಾಯಿ ಆಸ್ತಿಯ ಒಡೆಯ. ಆದರೆ ಈಗ ಕಾನೂನು ಹೋರಾಟದ ವೆಚ್ಚಕ್ಕಾಗಿ ಮುಂಬೈನ ವರ್ಲಿಯಲ್ಲಿರುವ ತಮ್ಮ ಪ್ರತಿಷ್ಠಿತ 5 ಅಂತಸ್ತಿನ ಮಾರ್ಲೋ ಬಂಗಲೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಶೀನಾ ಕೊಲೆ ಪ್ರಕರಣದಲ್ಲಿ ವಾದ ಮಂಡಿಸಲು ಪೀಟರ್ ಮುಖರ್ಜಿ ಅವರು ದುಬಾರಿ ವಕೀಲರನ್ನೇ ನೇಮಕ ಮಾಡಿಕೊಂಡಿದ್ದು, ಅವರು ಒಂದು ವಿಚಾರಣೆಗೆ 4ರಿಂದ 5 ಲಕ್ಷ ರುಪಾಯಿ ಶುಲ್ಕ ವಿಧಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಪೀಟರ್ ಮುಖರ್ಜಿ ಅವರು ಈಗಾಗಲೇ ತಮ್ಮ ವಕೀಲರಿಗೆ 1.5 ಕೋಟಿ ರುಪಾಯಿ ಶುಲ್ಕ ಪಾವತಿಸಿದ್ದಾರೆಂದು ವರದಿ ವಿವರಿಸಿದೆ.
ವಕೀಲರ ದುಬಾರಿ ವೆಚ್ಚ ಭರಸಿಲು ಈಗ ವರ್ಲಿಯಲ್ಲಿರುವ 3 ಸಾವಿರ ಚದರ ಅಡಿಯ ಡಬ್ಬಲ್ ಬೆಡ್ ರೂಂನ ಐಶಾರಾಮಿ ಮನೆಯನ್ನು (ಅಂದಾಜು 15ರಿಂದ 20 ಕೋಟಿ) ಮಾರಾಟ ಮಾಡಲು ನಿರ್ಧರಿಸಿದ್ದಾರಂತೆ.
ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ವಿರುದ್ಧ ಕೊಲೆ, ಸಂಚು ಮತ್ತು ಪುರಾವೆ ನಾಶದ ಆರೋಪ ದಾಖಲಾಗಿದೆ.