ನವದೆಹಲಿ: ಪಠಾಣ್ ಕೋಟ್ ದಾಳಿ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಪ್ರಶ್ನೆಗೆ ಉತ್ತರಿಸುತ್ತಿದ್ದ ಮನೋಹರ್ ಪರಿಕ್ಕರ್ ಅವರ ಅಂಕಿ-ಅಂಶಗಳ ಬಗ್ಗೆ ಸಿಂಧಿಯಾ ಅಪಸ್ವರವೆತ್ತಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಿಂಧಿಯಾ ಅವರಿಗೆ ನೀವು ಉಗ್ರರೊಂದಿಗೆ ಸಂಪರ್ಕದಲ್ಲಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದಕರ ದಾಳಿ ಬಗ್ಗೆ ಅಂಕಿ-ಅಂಶಗಳನ್ನು ಲೋಕಸಭೆ ಮುಂದಿಡುತ್ತಿದ್ದ ರಕ್ಷಣಾ ಸಚಿವರು ಪಠಾಣ್ ಕೋಟ್ ವಾಯು ನೆಲೆಯಲ್ಲಿ ದಾಳಿ ನಡೆಸಿದ ಉಗ್ರರು ಜನವರಿ 2 ರಂದು ಬೆಳಿಗ್ಗೆ 3 :11 ಕ್ಕೆ ವಾಯು ನೆಲೆ ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ. ಪರಿಕ್ಕರ್ ಅವರ ಹೇಳಿಕೆಗೆ ಸಿಂಧಿಯಾ ಅಪಸ್ವರವೆತ್ತಿದ್ದಾರೆ. ಸಿಂಧಿಯಾಗೆ ಪ್ರರಿಕ್ರಿಯೆ ನೀಡಿದ ರಕ್ಷಣಾ ಸಚಿವರು "ಆ ಸಮಯದಲ್ಲಿ ಭಯೋತ್ಪಾದಕರು ಅಲ್ಲಿರಲಿಲ್ಲ ಎಂದು ಹೇಳುವುದಾದರೆ ನೀವು ಉಗ್ರರೊಂದಿಗೆ ಸಂಪರ್ಕದಲ್ಲಿದ್ರಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ನವರ ಪ್ರಶ್ನೆಗಳಿಗೆ ಉತ್ತರಿಸಲು ಮನೋಹರ್ ಪರಿಕ್ಕರ್ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.