ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತಕ್ಕೆ ದೇವರು ಕೊಟ್ಟ ಉಡುಗೊರೆಯಾಗಿದ್ದು, ಮೋದಿಯವರು ಬಡವರ ಉದ್ಧಾರಕ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ನಿನ್ನೆ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯವರ ಕುರಿತು ಪ್ರಶಂಸೆಗಳ ಸುರಿಮಳೆಗೈದಿರುವ ವೆಂಕಯ್ಯ ನಾಯ್ಡು ಅವರು, ಗೌರವ ಹಾಗೂ ಹೂಡಿಕೆಗೆ ಉತ್ತಮ ತಾಣವಾಗಿ ಇಂದು ಭಾರತವನ್ನು ಗುರ್ತಿಸಲಾಗುತ್ತಿದೆ. ಮೋದಿಯವರು ಭಾರತಕ್ಕೆ ದೇವರು ಕೊಡ್ಡ ಉಡುಗೊರೆಯಾಗಿದ್ದಾರೆ. ಮೋದಿ ಬಡವರ ಉದ್ಧಾರಕ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸವಾಲನ್ನು ಎದುರಿಸಿದ್ದಾರೆ. ಆ ಸವಾಲುಗಳಿಗೆ ಪರಿಹಾರ ಕಂಡುಕೊಂಡು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ನೇಪಾಳ ಭೀಕರ ಭೂಕಂಪದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದಾರೆ. ಭಾರತ-ಆಫ್ಘಾನಿಸ್ಥಾನದೊಂದಿಗೆ ಉತ್ತಮ ಸಂಬಂಧ ಹೊಂದಲು ನೆರವಾಗಿದ್ದಾರೆ. ಬಾಂಗ್ಲಾದೇಶದೊಂದಿಗಿನ ಗಡಿ ಒಪ್ಪಂದವನ್ನು ಯಶಸ್ವಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿ ಶಾಂತಿಯುತ ಮಾತುಕತೆ ನಡೆಸಿದ್ದಾರೆ ಇದು ಪ್ರಧಾನಿ ಮೋದಿಯವರು ಮಾಡಿರುವ ಸಾಧನೆಗಳಾಗಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಜೆಎನ್ ಯು ವಿವಾದ ಕುರಿತಂತೆ ಪರೋಕ್ಷವಾಗಿ ಮಾತನಾಡಿದ ಅವರು, ಸಿದ್ಧಾಂತಗಳು ಬಿಜೆಪಿ ನಂಬಿಕೆಗಳನ್ನು ಪ್ರತಿನಿಧಿಸುತ್ತದೆ. ಭಾರತ ಸಂವಿಧಾನ ಅಭಿವ್ಯಕ್ತಿಸುವ, ಅಸಮ್ಮತಿಸುವ ಸಂಪೂರ್ಣ ಹಕ್ಕನ್ನು ನೀಡುತ್ತದೆ. ಆದರೆ, ದೇಶ ಒಡೆಯುವುದನ್ನು ಸಹಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
ವೆಂಕಯ್ಯ ನಾಯ್ಜು ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ರಾಜನಾಥ್ ಸಿಂಗ್ ಅವರು, ವೆಂಕಯ್ಯ ನಾಯ್ಡು ಈ ರೀತಿಯಾಗಿ ಮಾತನಾಡಿರುವುದನ್ನು ನಾನು ಕೇಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿಯವರು ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಎಂಬ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಲು ತಿರಸ್ಕರಿಸಿದ್ದಾರೆ.