ನವದೆಹಲಿ: ನಗರ ಪ್ರದೇಶಗಳಿಗೆ ಯುವಕರ ವಲಸೆಯನ್ನು ತಡೆಗಟ್ಟಲು, ಉದ್ಯೋಗ ಸೃಷ್ಟಿಗಾಗಿ ಬಿಪಿಒ ಗಳನ್ನು ಗ್ರಾಮೀಣ ಪ್ರದೇಶಗಳು, ಸಣ್ಣ ನಗರಗಳತ್ತ ಕೊಂಡೊಯ್ಯಲಾಗುತ್ತಿದೆ ಎಂದು ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಬಿಪಿಒ ಗಳನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸುವುದರಿಂದ ಗ್ರಾಮೀಣ ಪ್ರದೇಶದ ಯುವಕರಿಗೆ ಅವರಿದ್ದಲ್ಲೇ ಉದ್ಯೋಗ ದೊರೆಯುತ್ತದೆ. ಇದರಿಂದಾಗಿ ಯುವಕರು ನಗರ ಪ್ರದೇಶಗಳತ್ತ ವಲಸೆ ಬರುವುದು ಕಡಿಮೆಯಾಗಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್, ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಗ್ರಾಮೀಣ ಪ್ರದೇಶದಲ್ಲಿ 398 ಕಿಮಿ ವರೆಗೆ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಹಾಕಲಾಗಿತ್ತು. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 1 ಲಕ್ಷ ಕಿಮಿ ಗೂ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಹಾಕಲಾಗಿದ್ದು, 50 ,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಲುಪಲಾಗಿದೆ ಎಂದು ತಿಳಿಸಿದ್ದಾರೆ. ಮಾಹಿತಿತಂತ್ರಜ್ಞಾನದೊಂದಿಗೆ ಸೇರಿರುವ ಪ್ರತಿಭೆಯಲ್ಲಿ ದೇಶದ ಭವಿಷ್ಯ ಅಡಗಿದೆ, ದೇಶದ ಅಭಿವೃದ್ಧಿಗೆ ಇಂಟರ್ ನೆಟ್ ಬಹುಮುಖ್ಯವಾದ ಸಾಧನ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.