ಜಮ್ಮು; ಎಲ್ಲಾ ದೇಗುಲಗಳಲ್ಲೂ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಮಾಜಿ ಜಮ್ಮ ಮತ್ತು ಕಾಶ್ಮೀರ ಮುಖ್ಯಮಂತ್ರಿ ಫರೂಖ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದ್ದಾರೆ.
ವಿಧವೆಯರ ಆಚರಣೆಯನ್ನು ಮುರಿದಿರುವ ಸಾವಿರಕ್ಕೂ ಹೆಚ್ಚು ವಿಧವೆಯರು ಇಂದು ವೃಂದಾವನದಲ್ಲಿ ಹೋಳಿ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ಮಹಿಳೆಯರು ಈ ದೇಶದ ಅವಿಭಾಜ್ಯ ಅಂಗ. ಮಹಿಳೆಯರ ಸಬಲೀಕರಣವಾಗಬೇಕಿದ್ದರೆ, ಮೊದಲು ಎಲ್ಲಾ ದೇಗುಲಗಳಲ್ಲೂ ಮಹಿಳೆಯರು ಪ್ರವೇಶ ನೀಡಲು ಅವಕಾಶ ನೀಡಬೇಕೆಂದು ಹೇಳಿದ್ದಾರೆ.
ವೃಂದಾವನದಲ್ಲಿ ವಿಧವೆಯರು ಹೋಳಿ ಆಚರಣೆ ಮಾಡುತ್ತಿರುವುದು ನಿಜಕ್ಕೂ ಅದ್ಭುತ ವಿಚಾರ. ನಮ್ಮ ದೇಶದಲ್ಲಿ ಈ ರೀತಿಯ ಬೆಳವಣಿಗೆಯಾಗುತ್ತಿರುವುದಕ್ಕೆ ಹೆಮ್ಮೆ ಪಡಬೇಕಿದೆ. ಭಾರತ ಧನಾತ್ಮಕ ಚಿಂತನೆಗಳ ಮೂಲಕ ಅಭಿವೃದ್ಧಿಯಾಗುತ್ತಿರುವುದು ಉತ್ತಮ ವಿಚಾರ ಎಂದು ಹೇಳಿದ್ದಾರೆ.
ಇದೇ ವೇಳೆ ಬ್ರುಸ್ಸೆಲ್ಸ್ ಉಗ್ಗರ ದಾಳಿ ಕುರಿತಂತೆ ಮಾತನಾಡಿರುವ ಅವರು, ವಿಶ್ವವು ಒಗ್ಗೂಡಿ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ. ಭಯೋತ್ಪಾದನೆ ವಿಶ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದು ಎಲ್ಲಾ ದೇಶಗಳಿಗೆ ತಿಳಿದಿದೆ. ಭಯೋತ್ಪಾದನೆ ಮುಂದೊಂದು ದಿನ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದಾಗ ಅಂದು ನಮ್ಮನ್ನು ಯಾರೂ ನಂಬಲಿಲ್ಲ.
ಇದು ಎಲ್ಲರಿಗೂ ಈ ಮಾತುಗಳು ನೆನಪಾಗುತ್ತಿವೆ. ಭಯೋತ್ಪಾದನೆಗೆ ಯಾವುದೇ ಧರ್ಮವೆಂಬುದಿರುವುದಿಲ್ಲ. ಅವರಿಗಿರುವುದು ಒಂದೇ ಗುರಿ ದಾಳಿ ಮಾಡಿವುದು, ಸ್ಫೋಟಿಸುವುದು. ಹೀಗಾಗಿ ವಿಶ್ವದಲ್ಲಿ ಭಯೋತ್ಪಾದನೆಯನ್ನು ತಡೆಗಟ್ಟಬೇಕಾದರೆ, ಎಲ್ಲಾ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಮತ್ತು ಪಿಡಿಪಿ ನಡುವಿನ ಸಂಬಂಧ ಕುರಿತಂತೆ ಮಾತನಾಡಿರುವ ಅವರು, ಧನಾತ್ಮಕ ಚಿಂತನೆಗಳು ಹೊರಬರಬೇಕಿದೆ. ಸರ್ಕಾರ ರಚನೆಗಾಗಿ ಹಲವು ತಿಂಗಳಿನಿಂದಲೂ ಕಾಯುತ್ತಿದ್ದೇವೆ. ಶೀಘ್ರದಲ್ಲೇ ಸರ್ಕಾರ ರಚನೆಯಾಗುವುದರ ಬಗ್ಗೆ ನಮಗೆ ನಂಬಿಕೆಯಿದೆ. ಸರ್ಕಾರ ರಚನೆಯಿಂದಾಗಿ ಒಳಿತಾಗಿದೆಯೋ ಅಥವಾ ಕೆಡುಕಾಗಿದೆಯೋ ಎಂಬ ಪ್ರಶ್ನೆಯನ್ನು ಒಂದು ವರ್ಷದ ಬಳಿಕ ಕೇಳಿ ಎಂದು ಹೇಳಿದ್ದಾರೆ.
ಈ ಹಿಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಕ್ರಿಕೆಟ್ ಕುರಿತಂತೆ ಮಾತನಾಡಿ ಕ್ರಿಕೆಟ್ ಒಂದು ಗುಲಾಮರ ಆಟ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಫರೂಕ್ ಅಬ್ದುಲ್ಲಾ ಅವರು, ವ್ಯಕ್ತಿ ಹೆಸರು ಹೇಳಲು ಇಚ್ಛಿಸುವುದಿಲ್ಲ. ಆದರೆ, ಕ್ರೀಡೆಯನ್ನು ಕ್ರೀಡಾ ದೃಷ್ಟಿಯಲ್ಲೇ ನೋಡಬೇಕು. ಅದು ಯಾವುದೇ ಕ್ರೀಡೆಯಾಗಿರಲಿ ಟೆನ್ನಿಸ್, ಹಾಕಿ, ಕ್ರಿಕೆಟ್ ಅಥವಾ ಗಾಲ್ಫ್ ಆಗಿರಲಿ ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದಲೇ ನೋಡಬೇಕು. ನಮ್ಮ ಭಾರತ ಉತ್ತಮ (ಕ್ರಿಕೆಟ್) ತಂಡವನ್ನು ಹೊಂದಿರುವುದಕ್ಕೆ ನಮಗೆ ಹೆಮ್ಮೆಯಿದೆ. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟಿ-20 ಪಂದ್ಯವನ್ನು ನಾವೇ ಗೆಲ್ಲುತ್ತೇವೆಂದು ನಂಬಿದ್ದೇನೆ ಎಂದಿದ್ದಾರೆ.