ನವದೆಹಲಿ: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ಮೀಸಲಾತಿ ಸೀಟುಗಳನ್ನು ಶೇಕಡಾ 50ರಷ್ಟು ಹೆಚ್ಚಿಸಿದೆ.
ಹಿರಿಯ ನಾಗರಿಕರಿಗೆ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂದು ಸಾರ್ವಜನಿಕರಿಂದ ತೀವ್ರ ಬೇಡಿಕೆ ಕೇಳಿಬಂದಿತ್ತು. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ಈ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಮಂಡಳಿ ಸದಸ್ಯ ಮೊಹಮ್ಮದ್ ಜೇಮ್ ಶೆಡ್ ತಿಳಿಸಿದ್ದಾರೆ.
ಹಿರಿಯ ನಾಗರಿಕರ ಜೊತೆಗೆ 45 ವರ್ಷ ಮೀರಿದ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಸಹ ಈ ಕೋಟಾ ಸೀಟು ಲಭ್ಯವಾಗಲಿದೆ.
ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ನಿಯಮ 2007ರಲ್ಲಿ ಆರಂಭವಾಯಿತು. ಇದುವರಗೆ ಸ್ಲೀಪರ್, ಎಸಿ-3 ಟಯರ್ ಮತ್ತು ಎಸಿ-2 ಟಯರ್ ದರ್ಜೆಗಳಲ್ಲಿ ಪ್ರತಿ ಬೋಗಿಗಳಲ್ಲಿ ಎರಡು ಕೆಳ ಬರ್ತ್ ಗಳನ್ನು ಒಟ್ಟಾಗಿ ಹಿರಿಯ ನಾಗರಿಕರಿಗೆ ಮೀಸಲಿಡಲಾಗುತ್ತಿತ್ತು.
ಕಳೆದ ವರ್ಷ ಅದನ್ನು ಪ್ರತಿ ಕೋಚ್ ಗೆ 4 ಕೆಳ ಬರ್ತ್ ಗೆ ಹೆಚ್ಚಳ ಮಾಡಲಾಗಿತ್ತು. ಅದನ್ನೀಗ 6ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಸ್ಲೀಪರ್ ಕೋಚ್, 3ಎಸಿ,2ಎಸಿ ದರ್ಜೆಗಳ ಪ್ರತಿ ಬೋಗಿಯ ಕೆಳ ಬರ್ತ್ ಗಳಲ್ಲಿ ಒಟ್ಟಾರೆ 6 ಸೀಟುಗಳಿರುತ್ತವೆ. ಅಂದರೆ ಒಂದು ರೈಲಿನಲ್ಲಿ ಮೀಸಲು ಟಿಕೆಟ್ ನಡಿ ಹಿರಿಯ ನಾಗರಿಕರಿಗೆ ಒಟ್ಟು ಸುಮಾರು 90 ಸೀಟುಗಳು ಮೀಸಲಿರುತ್ತವೆ.
ಈ ನಿಯಮ ರಾಜಧಾನಿ, ಡುರೊಂಟೋ ಮತ್ತು ಸಂಪೂರ್ಣ ಎಸಿ ಎಕ್ಸ್ ಪ್ರೆಸ್ ರೈಲುಗಳಲ್ಲಿ 3 ಎಸಿ ವರ್ಗಗಳಲ್ಲಿ ಪ್ರತಿ ಬೋಗಿಯ ನಾಲ್ಕು ಕೆಳ ಬರ್ತ್ ಗಳಲ್ಲಿ ಈ ಸೌಲಭ್ಯವಿರುತ್ತದೆ.