ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸುತ್ತಿರುವ ಪಾಕ್ ತನಿಖಾ ತಂಡಕ್ಕೆ ಭಾರತ ಸರ್ಕಾರ ವೀಸಾ ನೀಡಿದೆ.
ಮಾ.27 ರಂದು ಪಾಕಿಸ್ತಾನ ತನಿಖಾ ತಂಡ ಭಾರತಕ್ಕೆ ಆಗಮಿಸಲಿದ್ದು 28 ರಂದು ಪಠಾಣ್ ಕೋಟ್ ವಾಯು ನೆಲೆಯಲ್ಲಿ ತನಿಖೆ ನಡೆಸಲಿದೆ. ನೇಪಾಳದಲ್ಲಿ ನಡೆದ ಸಾರ್ಕ್ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಇಲಾಖೆ ಸಲಹೆಗಾರ ಸರ್ತಾಜ್ ಅಜೀಜ್ - ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ ನಂತರ ಪಾಕ್ ತನಿಖಾ ತಂಡಕ್ಕೆ ವೀಸಾ ನೀಡಲಾಗಿದೆ.
ಜ.2 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯು ನೆಲೆಯಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕರಿಗೂ ಪಾಕಿಸ್ತಾನದ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆಗೂ ನಂಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಚನೆ ಮಾಡಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸಲಿದೆ.