ನವದೆಹಲಿ: ಲಿಬಿಯಾದಲ್ಲಿ ಶುಕ್ರವಾರ ನಡೆದ ಷೆಲ್ ದಾಳಿಯಲ್ಲಿ ಕೇರಳದ ನರ್ಸ್ ಹಾಗೂ ಆಕೆಯ ಪುತ್ರ ಮೃತಪಟ್ಟಿರುವುದಾಗಿ ಶನಿವಾರ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ದೃಢಪಡಿಸಿದ್ದಾರೆ.
ನಿನ್ನೆ ಲಿಬಿಯಾದಲ್ಲಿ ನಡೆದ ದಾಳಿಯಲ್ಲಿ ಕೇರಳದ ನರ್ಸ್ ಮತ್ತು ಆಕೆಯ ಪುತ್ರ ಮೃತಪಟ್ಟಿರುವ ವರದಿ ಬಂದಿದೆ. ಟ್ರಿಪೋಲಿಯಿಂದ ಸುಮಾರು 45 ಕಿ.ಮೀ. ದೂರದ ಝವೀಯಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ' ಎಂದು ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಮೃತಪಟ್ಟವರನ್ನು ನರ್ಸ್ ಸುನು ಸತ್ಯನ್ ಮತ್ತು ಆಕೆಯ ಪುತ್ರ ಪ್ರಣವ್ ಎಂದು ಗುರುತಿಸಲಾಗಿದ್ದು, ಲಿಬಿಯಾದ ಸುಬ್ರತಾ ನಗರದ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಾಗಿದ್ದರು. ಶುಕ್ರವಾರ ಸಂಜೆ 4 ಗಂಟೆಯ ವೇಳೆ ರಾಕೆಟ್ ಉರುಳಿ ಬಿದ್ದ ಕಾರಣ ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.
ಸುನು ಅವರ ಪತಿ ವಿಪಿನ್ ಅವರೊಂದಿಗೆ ಭಾರತೀಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದಿರುವ ಸುಶ್ಮಾ, ಝವೀಯಾ ಆಸ್ಪತ್ರೆಯಲ್ಲಿ 26ಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.