ಗೋವಾ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಅಜೆಂಡಾದ ಅಂಗವಾಗಿ ದಕ್ಷಿಣ ಗೊವಾದ ಪಂಜಿಮ್‌ನಲ್ಲಿರುವ ನಖೇರಿ ಕ್ವಿಟೋಲ್‌ನಲ್ಲಿ ಮಾರ್ಚ್ 28 ರಿಂದ ಮಾರ್ಚ್ 31ರ ವರೆಗೆ ಡಿಫೆನ್ಸ್ ಎಕ್ಸ್‌ಪೋ 2016 ನಡೆಯಲಿದೆ. ಬಿನ್ನೇನಿಯಲ್ ಡಿಫೆನ್ಸ್ ಎಕ್ಸ್‌ಪೋದ 9 ನೇ ಸಂಚಿಕೆ ಇದಾಗಿದ್ದು, ರಕ್ಷಣಾ ಸಚಿನ ಮನೋಹರ್ ಪರಿಕ್ಕರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ.
ಡಿಫೆನ್ಸ್ ಎಕ್ಸ್‌ಪೋ ವಿಶೇಷತೆಗಳೇನು?
ಈ ಎಕ್ಸ್‌ಪೋದಲ್ಲಿ ಒಟ್ಟು 1,000 ಕಂಪನಿಗಳು ಭಾಗವಹಿಸುತ್ತಿವೆ. ಇದರಲ್ಲಿ 510 ಕಂಪನಿಗಳು ಭಾರತದದ್ದು ಮತ್ತು 490 ಕಂಪನಿಗಳು ವಿದೇಶದ್ದಾಗಿವೆ. 2014 ರಲ್ಲಿ ಒಟ್ಟು 256 ಭಾರತೀಯ ಕಂಪನಿಗಳು ಈ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದು, ಈ ಬಾರಿ ಕಂಪನಿಗಳ ಸಂಖ್ಯೆ ದುಪಟ್ಟು ಆಗಿದೆ. ಅದೇ ವೇಳೆ ಕಳೆದ ವರ್ಷ 368 ವಿದೇಶಿ ಕಂಪನಿಗಳು ಭಾಗಿಯಾಗಿದ್ದವು. ಇದರಲ್ಲೀಗ ಒಟ್ಟು 47 ರಾಷ್ಟ್ರಗಳು ಭಾಗವಹಿಸಿದ್ದು ಕಳೆದ ವರ್ಷ 30 ರಾಷ್ಟ್ರಗಳು ಭಾಗಿಯಾಗಿದ್ದವು.
ಭಾರತದಲ್ಲಿ ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿಯೂ ಇದು ಸಹಾಯಕವಾಗುತ್ತಿದ್ದು, ಇದರಿಂದ ದೇಶದ ರಕ್ಷಣಾ ವ್ಯವಸ್ಥೆಗೆ ಉತ್ತೇಜನ ಸಿಗುತ್ತದೆ.
ತಂತ್ರಜ್ಞಾನದ ಸಹಾಯದಿಂದ ಜಾಗತಿಕ ಮಟ್ಟದಲ್ಲಿ ರಕ್ಷಣಾ ಯಂತ್ರಗಳನ್ನು ನಿರ್ಮಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಈ ಕಾರ್ಯಕ್ಕಾಗಿ ಭಾರತ ವಿದೇಶ ರಾಷ್ಟ್ರಗಳ ಸಹಾಯವನ್ನು ಬಯಸಿದೆ. ಕ್ಷಿಪಣಿ, ಸಬ್‌ಮರೀನ್, ವಿಮಾನ ಮತ್ತು ಇನ್ನಿತರ ರಕ್ಷಣಾ ಯಂತ್ರಗಳ ನಿರ್ಮಾಣಕ್ಕಾಗಿ ಭಾರತ ವಿದೇಶ ರಾಷ್ಟ್ರಗಳ ಸಹಾಯ ಪಡೆಯಲು ಹಾಗೂ ತಮ್ಮ ಸಾಮರ್ಥ್ಯವನ್ನು ಮನವರಿಕೆ ಮಾಡುವುದಕ್ಕಾಗಿ ಈ ಎಕ್ಸ್‌ಪೋ ಸಹಾಯಕವಾಗಲಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಎಕ್ಸ್‌ಪೋ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಎಕ್ಸ್ ಪೋದಲ್ಲಿ ಭಾರತೀಯ ಸೇನೆಯ ನೆಲ, ಜಲ ಮತ್ತು ವಾಯುಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಗುವುದು. ರಕ್ಷಣಾ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವುದಕ್ಕೂ ಇದು ಸಹಾಯವಾಗುತ್ತದೆ.
ಇಂಡಸ್ಟ್ರಿಯಲ್ ಎಸ್ಟೇಟ್‌ಗಳು ಕಬಳಿಸಿರುವ ಭೂಮಿಯನ್ನೀಗ ತಾತ್ಕಾಲಿಕವಾಗಿ ಡಿಫೆನ್ಸ್ ಎಕ್ಸ್‌ಪೋಗಾಗಿ ನೀಡಲಾಗಿದೆ. ಅಲ್ಲಿನ ಸ್ಥಳೀಯರು ಇಂಡಸ್ಟ್ರಿಯಲ್ ಎಸ್ಟೇಟ್‌ಗಳ ವಿರುದ್ಧ ಭೂಕಬಳಿಕೆ ಆರೋಪ ಹೊರಿಸಿ ನ್ಯಾಯಾಂಗ ಹೋರಾಟ ಮಾಡುತ್ತಿರುವಾಗಲೇ ವಿವಾದಿತ ಭೂಮಿಯಲ್ಲಿ ಡಿಫೆನ್ಸ್ ಎಕ್ಸ್‌ಪೋ ನಡೆಯುತ್ತಿದೆ. ವಿವಾದಿತ ಭೂಮಿಯಲ್ಲಿ ಎಕ್ಸ್‌ಪೋ ನಡೆಸುತ್ತಿರುವುದಕ್ಕಾಗಿ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ. ಏತನ್ಮಧ್ಯೆ, ಸೋಮವಾರವೇ ಈ ವಿವಾದದ ಬಗ್ಗೆ ವಿಚಾರಣೆ ನಡೆದಿದ್ದು, ಪ್ರಸ್ತುತ ಎಕ್ಸ್‌ಪೋವನ್ನು ಸ್ಥಗಿತಗೊಳಿಸುವುದಕ್ಕೆ ಹೈಕೋರ್ಟ್ ನಿರಾಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics