ನವದೆಹಲಿ: ಜಮ್ಮು ಕಾಶ್ಮೀರ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮೆಹಬೂಬ ಮುಫ್ತಿ ಭಾರತ್ ಮಾತಾ ಕೀ ಜೈ ಎಂದು ಹೇಳಬೇಕು ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದೆ. ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಪಂಚದಾದ್ಯಂತ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುವಂತೆ ಮಾಡುವುದಾಗಿ ಹೇಳಿದ್ದರು. ಜೊತೆಗೆ ಕಾಶ್ಮೀರದಿಂದ ಈ ಅಭಿಯಾನ ಆರಂಭಿಸುವುದಾಗಿ ಹೇಳಿದ್ದರು.
ಭಾರತ್ ಮಾತಾ ಕೀ ಜೈ ಎಂದು ಹೇಳಬೇಕು ಎನ್ನುವ ಭಾವನೆ ಮನಸ್ಸಿನೊಳಗಿಂದ ಬರಬೇಕು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತಿರುವ ಮೆಹಬೂಬ ಮುಫ್ತಿ , ಉಗ್ರ ಅಫ್ಜಲ್ ಗುರು ಬಗ್ಗೆ ಕರುಣೆ ಹೊಂದಿದ್ದಾರೆ. ಜೊತೆಗೆ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ.