ನವದೆಹಲಿ: ಸುಮಾರು 10 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ದೇಶ ಕಾಯುವ ಸೈನಿಕರಿಗೆ ಬುಲೆಟ್-ಪ್ರೂಫ್ ಜಾಕೆಟ್‌ಗಳು ದೊರೆಯಲಿವೆ.
3,53,765 ಬುಲೆಟ್-ಪ್ರೂಫ್ ಮೇಲಂಗಿಗಳಿಗೆ ಬೇಡಿಕೆ ಇದ್ದು, ಶೀಘ್ರವೇ 50 ಸಾವಿರ ದೊರೆಯಲಿದೆ. ಇದಕ್ಕಾಗಿ ಭಾರತೀಯ ಸೇನೆಯು 140 ಕೋಟಿ ರೂ.ಗಳ 'ತುರ್ತು ಖರೀದಿ' ಒಪ್ಪಂದ ಮಾಡಿಕೊಂಡಿದೆ. 'ಆಗಸ್ಟ್ ತಿಂಗಳಲ್ಲಿ ಜಾಕೆಟ್‌ಗಳ ವಿತರಣೆ ಆರಂಭವಾಗಲಿದ್ದು, 2017ರ ಜನವರಿಯೊಳಗೆ ಎಲ್ಲ ಜಾಕೆಟ್‌ಗಳನ್ನೂ ಪೂರೈಸಲಾಗುತ್ತದೆ.
ಪ್ರಸ್ತುತ ಸೈನಿಕರು ಧರಿಸುವ ಭಾರದ ದಪ್ಪನೆಯ ಬುಲೆಟ್-ಪ್ರೂಫ್ ಉಡುಗೆಗಳಲ್ಲಿ ಸರಿಯಾದ ರಕ್ಷಣೆ ಸಿಗುತ್ತಿಲ್ಲ ಮತ್ತು ಅವುಗಳ ಬಾಳಿಕೆಯೂ ಕೊನೆಗೊಳ್ಳುವ ಹಂತದಲ್ಲಿವೆ. 11.8 ಲಕ್ಷ ಸೈನಿಕರುಳ್ಳ ಸೇನೆಗೆ ಇವುಗಳ ಭಾರಿ ಕೊರತೆಯೇ ಇತ್ತು. ನವೆಂಬರ್ 2014ರಲ್ಲಿ ರಕ್ಷಣಾ ಸಚಿವರಾಗಿ ಮನೋಹರ್ ಪಾರಿಕ್ಕರ್ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಇದರ ಅಗತ್ಯವನ್ನು ಮನಗಂಡು, 'ಮಧ್ಯಂತರ ತುರ್ತು ಖರೀದಿ'ಗೆ ಅನುಮೋದನೆ ನೀಡಿದ್ದರು.
ಹಿಂದೆಯೂ ಇದಕ್ಕಾಗಿ ಟೆಂಡರ್ ಕರೆದಿದ್ದು, ಆರು ಕಂಪನಿಗಳು ಒದಗಿಸಿದ ಸ್ಯಾಂಪಲ್‌ಗಳು ಸುರಕ್ಷತೆಯ ಪರೀಕ್ಷೆಗಳಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಟೆಂಡರ್ ರದ್ದಾಗಿತ್ತು. ಆಧುನಿಕವಾದ, ಕಡಿಮೆ ತೂಕದ ಜಾಕೆಟ್‌ಗಳು ತಲೆ, ಕತ್ತು, ಎದೆ, ಹೊಟ್ಟೆಯ ಕೆಳಭಾಗ ಮತ್ತು ಶರೀರದ ಎರಡೂ ಪಾರ್ಶ್ವಗಳಿಗೆ ಗುಂಡೇಟಿನಿಂದ ರಕ್ಷಣೆ ನೀಡಲಿದೆ. ಅಲ್ಲದೆ, ಕ್ಲಿಷ್ಟಕರ ಪರಿಸ್ಥಿತಿ ಮತ್ತು ಪರಿಸರಗಳಲ್ಲಿ ಸೈನಿಕರ ವೇಗದ ಚಲನೆಗೆ ಅನುಕೂಲಕರವಾಗಿಯೂ ಇವೆ.