ದೇಶ

ಚಂದ್ರಬಾಬು ನಾಯ್ಡು ನನ್ನನ್ನು ಹೊಡೆದಿದ್ದರು: ಸಚಿವ ಶ್ರೀನಿವಾಸ ರೆಡ್ಡಿ ಆರೋಪ

Manjula VN

ಹೈದರಾಬಾದ್: ನಿಜಾಮ್ ಶುಗರ್ಸ್ ಕುರಿತ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನನಗೆ ಹೊಡೆದಿದ್ದರು ಎಂದು ತೆಲಂಗಾಣ ಕೃಷಿ ಸಚಿವ ಶ್ರೀನಿವಾಸ ರೆಡ್ಡಿ ಅವರು ಗುರುವಾರ ಆರೋಪ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ತೆಲಂಗಾಣ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಈ ಆರೋಪವನ್ನು ಮಾಡಿರುವ ಶ್ರೀನಿವಾಸ ರೆಡ್ಡಿ ಅವರು, ನ್ಯಾಯ ಪಡೆಯುವಲ್ಲಿ ತೆಲಂಗಾಣ ಸಚಿವರ ಅವಸ್ಥೆ ಹೇಳತೀರದು. ಈ ಹಿಂದೆ ನಾಯ್ಡು ಅವರು ಖಾಸಗೀಕೃತ ನಿಜಾಮ್ ಶುಗರ್ಸ್ ನ್ನು ಪ್ರಸ್ತಾಪ ಮಾಡಿದ್ದರು. ಇದರ ಸಮಗ್ರ ವರದಿಗಾಗಿ ಸಮಿತಿಯೊಂದನ್ನು ರಚಿಸಿದ್ದರು. ಆದರೆ, ಸಮತಿಯಲ್ಲಿ ನಾನು ಸದಸ್ಯನಾಗಿರಲಿಲ್ಲ. ಆದರೆ, ಕೊಟಗಿರಿ ವಿದ್ಯಾಧರ ರಾವ್ ಮತ್ತು ವೈ. ರಾಮಕೃಷ್ಣುಡು ಸದಸ್ಯರಾಗಿದ್ದರು. ಸಮಿತಿ ವರದಿ ಸಲ್ಲಿಸುತ್ತಿದ್ದಂತೆ ಈ ಬಗ್ಗೆ ನಾಯ್ಡು ಅವರು ನಿರ್ಧಾರವನ್ನು ಕೈಗೊಂಡಿದ್ದರು.

ಇದನ್ನು ವಿರೋಧಿಸಿ ನಾನು ನಾಯ್ಡು ಅವರನ್ನು ಭೇಟಿಯಾಗಿದ್ದೆ. ಈ ವೇಳೆ ನನ್ನ ಮಾತುಗಳನ್ನು ಕೇಳಿದ್ದ ನಾಯ್ಡು ಅವರು ಕುಪಿತಿಗೊಂಡಿದ್ದರು. ಅಲ್ಲದೆ, ನನ್ನ ತೊಡೆಗೆ ಬಲವಾಗಿ ಹೊಡೆದು ಈಗಾಗಲೇ ನಿರ್ಧಾರ ತೆಗೆದುಕೊಂಡು ಆಗಿದೆ ಎಂದು ಹೇಳಿ ಕೊಠಡಿಯಿದ ಹೊರಟು ಹೋದರು.

ನಾನು ಯಾವಾಗಲೂ ದೋತಿಯನ್ನು ಹಾಕುತ್ತೇನೆ. ನಾಯ್ಡು ಅವರ ಹೊಡೆತ ಸಾಕಷ್ಟು ನೋವುಂಟು ಮಾಡಿತ್ತು. ಹೊಡೆತದ ನಂತರ ನಾಯ್ಡು ಅವರು ಮತ್ತೆ ನನ್ನನ್ನು ಕರೆದಿದ್ದರು. ಇದರಂತೆ ಅವರನ್ನು ಭೇಟಿಯಾದಾಗ ನೋವಾಯಿತೇ ಎಂದು ಕೇಳಿದ್ದರು. ಅಲ್ಲದೆ, ಕ್ಷಮೆಯಾಚಿಸಿದ್ದರು. ಈ ವೇಳೆ ನಿಮ್ಮ ಹೊಡೆತ ದೇಹಕ್ಕಲ್ಲದೆ ನನ್ನ ಹೃದಯಕ್ಕೆ ಸಾಕಷ್ಟು ನೋವುಂಟು ಮಾಡಿದೆ ಎಂದು ಹೇಳಿದ್ದೆ ಎಂದು ಹೇಳಿದರು.

ಶ್ರೀನಿವಾಸ ರೆಡ್ಡಿ ಅವರ ಈ ಹೇಳಿಕೆ ತೆಲಂಗಾಣ ವಿಧಾನಸಭೆ ಅಧಿವೇಶನದಲ್ಲಿ ಸಾಕಷ್ಟು ಗದ್ದಲವನ್ನುಂಟು ಮಾಡಿತ್ತು.  

ರೆಡ್ಡಿ ಅವರ ಈ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಶಾಸಕ ಜೀವನ್ ರೆಡ್ಡಿ ಅವರು, ನಾಯ್ಡು ಅವರು ಹೊಡೆದಿದ್ದಾರೆಂದು ಹೇಳುತ್ತಿರುವ ಶ್ರೀನಿವಾಸ್ ರೆಡ್ಡಿ ಅವರು ಇಷ್ಟೆಲ್ಲಾ ಅವಮಾನವಾದ ಮೇಲೂ ಮತ್ತೆ ಅವರ ಸಂಪುಟದಲ್ಲೇಕೆ ಮುಂದುವರೆದರು. ಆಗಲೇ ರಾಜಿನಾಮೆಯನ್ನು ನೀಡಬೇಕಿತ್ತು. ಈಗೇಕೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

SCROLL FOR NEXT