ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯ
ನವದೆಹಲಿ: ದೇಶದ್ರೋಹದ ಆರೋಪದ ಹಿನ್ನಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಇಳಿಮುಖವಾಗಿದೆ ಎಂದು ವಿವಿ ಅಧಿಕೃತರು ಹೇಳಿದ್ದಾರೆ.
ಪ್ರತೀ ಬಾರಿಯೂ ಈ ವಿವಿಗೆ ಬರುವ ಪ್ರವೇಶ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿತ್ತು. ಆದರೆ ಈ ಬಾರಿ ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ.
ಜೆಎನ್‌ಯು ಪ್ರವೇಶಕ್ಕಾಗಿರುವ ಪರೀಕ್ಷೆಗೆ ಅರ್ಜಿ ಸಲ್ಲಿಸಲಿರುವ ಕೊನೆಯ ದಿನಾಂಕ ಮಾರ್ಚ್ 21 ಆಗಿತ್ತು. ಈ ಬಾರಿ 76,000 ಅರ್ಜಿಗಳಷ್ಟೇ ಲಭಿಸಿವೆ. 2015ರಲ್ಲಿ 79,000 ಅರ್ಜಿ ಮತ್ತು 2014ರಲ್ಲಿ 72,000 ಅರ್ಜಿಗಳು ಲಭಿಸಿತ್ತು. ಕಳೆದ ವರ್ಷದ ಲೆಕ್ಕ ನೋಡಿದರೆ ಅದಕ್ಕಿಂತ ಹಿಂದಿನ ವರ್ಷಕ್ಕಿಂತ 7,000 ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಮೂರು ಸಾವಿರ ಅರ್ಜಿಗಳು ಕಡಿಮೆ ಬಂದಿವೆ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳಿವೆ,
ಅಫ್ಜಲ್ ಗುರು ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ್ದು ಮತ್ತು ಅದರ ನಂತರ ಅಲ್ಲಿ ನಡೆದ ಗಲಭೆಗಳ ಮೂಲಕ ಜೆಎನ್‌ಯು ಬಾರೀ ಸುದ್ದಿಯಾಗಿತ್ತು. ಕನಯ್ಯಾ ಕುಮಾರ್, ಉಮರ್ ಖಾಲೀದ್, ಅನಿರ್ಭನ್ ಭಟ್ಟಾಚಾರ್ಯ ಮೊದಲಾದವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಬಂಧಿಸಲಾಯಿತು. ಈ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆದು ಜೆಎನ್‌ಯು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಗಿತ್ತು.