ನವದೆಹಲಿ: ದೆಹಲಿಯ ಬಲ್ಲಿಮಾರನ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಬಿಲ್ಡರ್ ಒಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಬಲ್ಲಿಮಾರನ್ ಪ್ರದೇಶದ ಪಂಜಾಬಿ ಫಟಕ್ ನಿವಾಸಿ ಬಿಲ್ಡರ್ ಫಹೀಮ್ ಅಹ್ಮದ್ ಅವರನ್ನು ನಿನ್ನೆ ರಾತ್ರಿ 11ಗಂಟೆಯ ಸುಮಾರಿಗೆ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪೊಲೀಸರ ಪ್ರಕಾರ, ತಮ್ಮ ಮನೆಯ ಬಳಿ ವಾಕ್ ಮಾಡುತ್ತಿದ್ದ ಫಹೀಮ್ ಅಹ್ಮದ್ ಮೇಲೆ ದುಷ್ಕರ್ಮಿಗಳು ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಿದ್ದು, ಆ ಪೈಕಿ ಬಿಲ್ಡರ್ ಗೆ ಎರಡು ಗುಂಡುಗಳು ತಗುಲಿವೆ. ಗುಂಡಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅಹ್ಮದ್ ಅವರನ್ನು ಸಮೀಪದ ಲೋಕ ನಾರಾಯಣ ಜೈ ಪ್ರಕಾಶ್ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿಲ್ದರ್ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹಂತಕರ ಗುರುತು ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.