ದೇಶ

ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಚೀನಾ ಸಮಸ್ಯೆಗೆ ಸಿಲುಕಿಕೊಳ್ಳಲಿದೆ: ಕಾಂಗ್ರೆಸ್

Srinivas Rao BV

ನವದೆಹಲಿ: ಜೈಶ್ ಇ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಗೆ ಬಹಿಷ್ಕಾರ ಹಾಕುವ ಭಾರತದ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿರುವುದನ್ನು ವಿರೋಧಿಸಿರುವ ಕಾಂಗ್ರೆಸ್, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳು ಬಹುದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುತ್ತಿವೆ ಎಂದು ಎಚ್ಚರಿಸಿದೆ.
ಭಾರತದ ವಿರುದ್ಧ ಚೀನಾ ಹಗೆತನ ಸಾಧಿಸುತ್ತಿದೆ, ಇಂದು ಭಾರತದ ವಿರುದ್ಧವಿರುವ ಜೈಶ್- ಇ- ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳು ನಾಳೆ ಚೀನಾ ವಿರುದ್ಧವೂ ನಿಲ್ಲಲಿವೆ. ದುರುದ್ದೇಶದಿಂದ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳು ಭಯೋತ್ಪಾದನೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತವೆ ಎಂದು ಕಾಂಗ್ರೆಸ್ ಮುಖಂಡ ಪಿಸಿ ಚಾಕೋ ಅಭಿಪ್ರಾಯಪಟ್ಟಿದ್ದಾರೆ. 
ಪಠಾಣ್ ಕೋಟ್ ದಾಳಿ ಪ್ರಕರಣದಲ್ಲಿ ಜೈಶ್- ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮೌಲಾನಾ ಮಸೂದ್ ಅಜರ್ ಕೈವಾಡ ಇರುವ ಬಗ್ಗೆ ಆರೋಪ ಮಾಡಿರುವ ಭಾರತ ಸರ್ಕಾರ ಅಜರ್ ಗೆ ಬಹಿಷ್ಕಾರ ಹಾಕುವಂತೆ ವಿಶ್ವ ಸಂಸ್ಥೆಯನ್ನು ಕೋರಲು ಯತ್ನಿಸುತ್ತಿದೆ. ಆದರೆ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ. ವಿಶ್ವಸಂಸ್ಥೆಯ ಸಮಿತಿಗೆ ಮನವಿ ಮಾಡಿರುವ ಚೀನಾ, ಅಜರ್ ಗೆ ಬಹಿಷ್ಕಾರ ಹಾಕುವ   ನಿರ್ಧಾರವನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದೆ. ಚೀನಾ ಹೊರತುಪಡಿಸಿ ಭಾರತದ ನಿರ್ಣಯಕ್ಕೆ ಅಮೆರಿಕ, ಯುಕೆ, ಫ್ರಾನ್ಸ್ ಬೆಂಬಲ ನೀಡಿವೆ.

SCROLL FOR NEXT