ನವದೆಹಲಿ: ರಾಜ್ಯಸಭೆಯಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿರುವ ವ್ಯಕ್ತಿಗಳ ವಿರುದ್ಧವೂ ತನಿಖೆ ನಡೆಯಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬುಧವಾರ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಪರಿಕ್ಕರ್, ಅಗಸ್ಟಾ ವೆಸ್ಟ್ ಲ್ಯಾಂಡ್ ಕಾಪ್ಟರ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಒಪ್ಪಂದದಲ್ಲಿ ನೀತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಓರ್ವ ಮಾರಾಟಗಾರನ ಹೆಸರು ಮಾತ್ರ ಏಕೆ ನಿಗದಿ ಮಾಡಲಾಗಿದೆ ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು.
ಈ ಸಂಬಂಧ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವರು, ಕಾಂಗ್ರೆಸ್ ಕುತರ್ಕದಿಂದ ಸುಳ್ಳನ್ನು ಸತ್ಯ ಮಾಡಲು ಹೊರಟಿದೆ. ಭ್ರಷ್ಟಾಚಾರಕ್ಕೆ ಯಾರೂ ಬೆಂಬಲ ನೀಡಿದ್ದಾರೆ ಮತ್ತು ಅದರಿಂದ ಯಾರೂ ಲಾಭ ಪಡೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ದೇಶದ ಜನ ಬಯಸುತ್ತಾರೆ ಎಂದರು.
ಈ ವೇಳೆ ಮಾತನಾಡಿದ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು, ಮೊದಲು ನೀವು ಆ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಿ, ಅದನ್ನು ಕಪ್ಪು ಪಟ್ಟಿಗೆ ಸೇರಿಸಿ. ಒಂದು ನಿಮ್ಮ ಬಳಿ ಸಾಕ್ಷ್ಯಾಧಾರಗಳು ಇದ್ದರೆ ನಮ್ಮ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಿ. ಆದರೆ ಅನಗತ್ಯವಾಗಿ ನಮ್ಮನ್ನು ಹೆದರಿಸಬೇಡಿ ಮತ್ತು ಬ್ಲ್ಯಾಕ್ ಮೇಲ್ ಮಾಡಬೇಡಿ ಎಂದು ಪರಿಕ್ಕರ್ ಗೆ ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಸುಬ್ರಮಣ್ಯಯನ್ ಸ್ವಾಮಿ, ಅಗಸ್ಟಾ ಹಗರಣದಲ್ಲಿ ಸೂಪರ್ ಪಿಎಂ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬ ಭಾಗಿಯಾಗಿದೆ. ಇದನ್ನು ಸಾಭೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದರು. ಅಲ್ಲದೆ ಸಿಬಿಐ ಮೊದಲು ಸೋನಿಯಾ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.