ದೇಶ

ಜಾದವ್ ಪುರ ವಿವಿ ರಾಷ್ಟ್ರ ವಿರೋಧಿಗಳ ತಾಣ: ಬಿಜೆಪಿ

Srinivas Rao BV

ಕೋಲ್ಕತಾ: ಪಶ್ಚಿಮ ಬಂಗಾಳದ ಜಾದವ್ ಪುರ ವಿಶ್ವವಿದ್ಯಾನಿಲಯದಲ್ಲಿ ಬುದ್ಧ ಇನ್ ಎ ಟ್ರಾಫಿಕ್ ಜಾಮ್ ಚಿತ್ರ ಪ್ರದರ್ಶನದ ವಿಷಯದಲ್ಲಿ ಎಬಿವಿಪಿ ಹಾಗೂ ಎಡಪಕ್ಷದ ಸಂಘಟನೆಯ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾದ ಬೆನ್ನಲ್ಲೇ ಬಿಜೆಪಿ ಜಾದವ್ ಪುರ ವಿವಿಯನ್ನು ರಾಷ್ಟ್ರ ವಿರೋಧಿ ಶಕ್ತಿಗಳ ತಾಣ ಎಂದು ಟೀಕಿಸಿದೆ.
ವಿಶ್ವವಿದ್ಯಾನಿಲಯದ ಉಪಕುಲಪತಿ ಸುರಂಜನ್ ದಾಸ್ ಹಾಗೂ ಸಿಪಿಐ (ಎಂ) ಪಕ್ಷ ವಿವಿಯಲ್ಲಿ ರಾಷ್ಟ್ರವಿರೋಧಿ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ದಿಲೀಪ್ ಘೋಷ್, ಜಾದವ್ ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಶಾಂತಿಗೆ ಧಕ್ಕೆ ಉಂಟು ಮಾಡುವುದು ಸಾಮಾನ್ಯವಾಗಿದೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದಿದ್ದ ಚಿತ್ರದ ಪ್ರದರ್ಶನವನ್ನು ಅಕ್ರಮವಾಗಿ ತಡೆಗಟ್ಟಲಾಗಿದೆ.
ತಮ್ಮ ಸಿದ್ಧಾಂತದ ವಿರುದ್ಧವಾಗಿರುವ ಎಲ್ಲವನ್ನೂ ತಡೆಗಟ್ಟುವುವುದು ಸಿಪಿಐ(ಎಂ) ನ ಉದ್ದೇಶವಾಗಿದ್ದು ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜಾದವ್ ಪುರ ವಿವಿಯಲ್ಲಿ ವಿವೇಕ್ ಅಗ್ನಿ ಹೋತ್ರಿ ಅವರ ಸಿನಿಮಾ ಬುದ್ಧ ಇನ್ ಎ ಟ್ರಾಫಿಕ್ ಜಾಮ್ ಪ್ರದರ್ಶನದ ವಿಷಯದಲ್ಲಿ ಉಂಟಾದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾದವ್ ಪುರ ವಿವಿಯ ಅಧಿಕಾರಿಗಳು ಎಬಿವಿಪಿ ಕಾರ್ಯಕರ್ತರು ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

SCROLL FOR NEXT