ದೇಶ

ಕೇಂದ್ರದ ಎಚ್ಚರಿಕೆ ಪರಿಣಾಮ: ಮತ್ತೆ ಭಾರತ ಭೂಪಟ ಸೇರಿದ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರ

Srinivasamurthy VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನದಲ್ಲಿ, ಅರುಣಾಚಲ ಪ್ರದೇಶ ಚೀನಾದ ಭಾಗವೆಂಬಂತೆ ಪ್ರದರ್ಶನವಾಗುತ್ತಿದ್ದ ಹಿನ್ನಲೆಯಲ್ಲಿ ಕಳೆದವಾರ ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ  ಕಠಿಣ ಕ್ರಮಕ್ಕೆ ಫಲ ಸಂದಿದ್ದು, ಗೂಗಲ್ ಮ್ಯಾಪ್ ಮತ್ತು ಇತರೆ ಜಾಲತಾಣಗಳಲ್ಲಿ ವಿವಾದಿತ ಭೂ ಪ್ರದೇಶಗಳನ್ನು ಮತ್ತೆ ಭಾರತಕ್ಕೆ ಸೇರಿಸಲಾಗಿದೆ.

ಕಳೆದವಾರವಷ್ಟೇ ಕೇಂದ್ರ ಸರ್ಕಾರ ಭಾರತದ ಭೂಪಟ ಪ್ರಕಟಣೆಗೆ ಸರ್ಕಾರದ ಅನುಮತಿ ಪಡೆಯಬೇಕು ಎಂದು ಹೇಳಿತ್ತು. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಅರುಣಾಚಲ  ಪ್ರದೇಶವನ್ನು ವಿವಾದಿತ ಸ್ಥಳ ಎಂದು ಪರಿಗಣಿಸಿ ಭಾರತ ನಕಾಶೆಯಿಂದ ತೆಗೆದು ಹಾಕಿದರೆ ಅಂಥ ವ್ಯಕ್ತಿ ಅಥವಾ ಸಂಸ್ಥೆಗೆ ಗರಿಷ್ಠ ನೂರು ಕೋಟಿ ರು. ವರೆಗೆ ದಂಡ ಹಾಗೂ ನಕಾಶೆ ಪ್ರಕಟಿಸಿದ  ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಮಹತ್ವದ ಕರಡು ಸಿದ್ಧಪಡಿಸಿ ಎಚ್ಚರಿಕೆ ನೀಡಿತ್ತು.



ಇದರ ಪರಿಣಾಮವೋ ಏನೋ ಎಂಬತೆ ಇಷ್ಟು ದಿನ ಭಾರತ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನುಪಾಕಿಸ್ತಾನದ ಭಾಗವಂತೆ, ಅರುಣಾಚಲ ಪ್ರದೇಶವನ್ನು ಚೀನಾ ಭೂಪಟದಲ್ಲಿ  ಪ್ರದರ್ಶಿಸುತ್ತಿದ್ದ ಗೂಗಲ್ ಸಂಸ್ಥೆ ಸರ್ಕಾರದ ಎಚ್ಚರಿಕೆ ಬಳಿಕ ಪಿಒಕೆಯನ್ನು ಭಾರತಕ್ಕೆ ಸೇರಿಸಿದೆ. ಕೇವಲ ಪಿಒಕೆ ಅಷ್ಟೇ ಅಲ್ಲ ಚೀನಾ ಭೂಪಟದಲ್ಲಿ ಕಾಣಿಸುತ್ತಿದ್ದ ಅರುಣಾಚಲ ಪ್ರದೇಶ ಕೂಡ  ಇದೀಗ ಭಾರತಕ್ಕೆ ಸೇರ್ಪಡೆಯಾಗಿದೆ.

ಏನಿದು ಹೊಸ ಕರಡು?
ಭಾರತೀಯ ಭೌಗೋಳಿಕ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಸಿದ್ಧವಾಗಿರುವ ಕರಡೇ ಕೇಂದ್ರ ಸರ್ಕಾರ ಭೌಗೋಳಿಕ ಮಾಹಿತಿ ನಿಯಂತ್ರಣ ಮಸೂದೆ  (ಜಿಯೋ ಸ್ಪೇಷಿಯಲ್ ಇನಾರ್ಮೇಷನ್ ರೆಗ್ಯುಲೇಟರಿ ಬಿಲ್) ಕರಡು, ಕೇಂದ್ರ ಸರ್ಕಾರ ಈ ಕರಡಿನ ಪ್ರತಿಯನ್ನು ಸಿದ್ಧಪಡಿಸಿದ್ದು, ಭಾರತದ ಭೂಪಟವನ್ನು ತಪ್ಪಾಗಿ ಮುದ್ರಿಸುವ, ಪ್ರಕಟಿಸುವ  ಹಾಗೂ ಪ್ರಸರಣಗೊಳಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು. ಈ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ದೊರೆತರೆ ದೇಶದ ನಕ್ಷೆ ತಯಾರಿಸುವವರು, ಮುದ್ರಕರು  ಹಾಗೂ ಪ್ರಕಾಶಕರು ಭಾರತ ನಕ್ಷೆಯನ್ನು ಸಂಪೂರ್ಣವಾಗಿ ಪ್ರಕಟಿಸಬೇಕಾಗುತ್ತದೆ. ಅಂತರ್ಜಾಲಕ್ಕೂ ಈ ನಿಯಮ ಅನ್ವಯಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ನಕಾಶೆ  ಕಂಡುಬಂದರೆ ಸೈಬರ್ ಕ್ರೈಮ್ ವಿಭಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.

ಬಾಹ್ಯಾಕಾಶದಿಂದ ತೆಗೆಯುವ ಚಿತ್ರಗಳು, ವಿಮಾನ, ಚಾಲಕರಹಿತ ವಿಮಾನ, ಬಲೂನ್, ಡ್ರೋನ್ ಹೀಗೆ ಯಾವುದೇ ಮೂಲದಿಂದ ಭಾರತ ಭೂಪಟದ ಫೋಟೋ, ಅಂಕಿಅಂಶ, ನಕ್ಷೆಗಳನ್ನು  ಸಂಗ್ರಹಿಸುವುದಕ್ಕೂ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು.

SCROLL FOR NEXT