ದೇಶ

10 ಭಾಷೆಗಳಲ್ಲಿ 500 ಕೋರ್ಸ್ ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ

Rashmi Kasaragodu
ನವದೆಹಲಿ: ಪ್ರಸಕ್ತ ವರ್ಷದಲ್ಲಿ  ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. 
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಮಾನವಹಕ್ಕು ಮತ್ತು ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸಹಯೋಗದೊಂದಿಗೆ ಓಪನ್ ಆ್ಯಂಡ್ ಡಿಸ್ಟೆನ್ಸ್ ಲರ್ನಿಂಗ್ (ಒಡಿಎಲ್) ಕೋರ್ಸ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ. 
ಒಡಿಎಲ್ ಶಿಕ್ಷಣ ವ್ಯವಸ್ಥೆ ಮೂಲಕ ಮಾನವಶಾಸ್ತ್ರ, ಸಾಮಾಜಿಕ ಅಧ್ಯಯನ ಮತ್ತು ಸಾಮಾನ್ಯ ವಿಜ್ಞಾನ ವಿಷಯಗಳ ಬಗ್ಗೆ ಕೋರ್ಸ್ ಆರಂಭಿಸಲಾಗುವುದು.
ಅದೇ ವೇಳೆ ಮೊಬೈಲ್ ಆ್ಯಪ್ ಮತ್ತು ಆನ್ಲೈನ್ ಮೂಲಕ 10 ಭಾಷೆಗಳಲ್ಲಿ 500 ಕೋರ್ಸ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಕೋರ್ಸ್ಗಳೆಲ್ಲವೂ ಉಚಿತ ಕೋರ್ಸ್ ಗಳಾಗಿವೆ.
ಈಗಾಗಲೇ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್ಸಿಟಿ ಮತ್ತು ಸಾರ್ವಜನಿಕ ನಿಧಿಯ ರಾಜ್ಯ ಓಪನ್ ಯುನಿವರ್ಸಿಟಿಗಳಲ್ಲಿ  ಒಡಿಎಲ್ ಮೂಲಕ ಕೋರ್ಸ್ ನಡೆಸಲಾಗುತ್ತಿದೆ. ಇದರ ಜತೆಗೆ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ಸಂಸ್ಥೆಗಳೂ ಡೀಮ್ಡ್ ಯುನಿವರ್ಸಿಟಿಗಳಲ್ಲಿಯೂ ಈ ಕೋರ್ಸ್ಗಳನ್ನು ನಡೆಸಲಾಗುತ್ತದೆ.
ದೇಶದ ವಿವಿಧ ವಲಯಗಳಲ್ಲಿ ಕೋರ್ಸ್ಗಳ ಪಠ್ಯ ಕ್ರಮ ಪರಿಷ್ಕರಿಸುವುದಕ್ಕೆ ಸಂಬಂಧಿಸಿದಂತೆ ವಿದೇಶೀ ಸಂಸ್ಥೆಗಳ ಜತೆ ಚರ್ಚೆಗಳು ನಡೆದು ಬರುತ್ತಿವೆ. ಎನ್ಐಟಿಯ ಪಠ್ಯ ಕ್ರಮಕ್ಕೆ ಸಂಬಂಧಿಸಿದಂತೆ ಮೆಸಾಚ್ಯುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಇಂಜಿನಿಯಂರಿಗ್ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಸ್ಟಾನ್ಫೋರ್ಡ್ ವಿಶ್ವ ವಿದ್ಯಾಲಯ ಮೊದಲಾದವುಗಳ ಜತೆ ಚರ್ಚೆ ನಡೆದುಬರುತ್ತಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು ಜವಾಹರ್ ನವೋದಯ ವಿದ್ಯಾಲಯಗಳಿಲ್ಲದ 62 ಜಿಲ್ಲೆಗಳಲ್ಲಿ ಹೊಸ ವಿದ್ಯಾಲಯಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ.
SCROLL FOR NEXT