ನವದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರಿಗೆ ಜೀವ ಬೆದರಿಕೆ ಕರೆ ಬಂದಿದೆ, ಹಾಗಾಗಿ ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಕೋರಿ ಕಾಂಗ್ರೆಸ್ ನಾಯಕರು ಸೋಮವಾರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೋರಲಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ಡುವ ಪತ್ರವೊಂದು ಪುದುಚೇರಿಯ ಕಾಂಗ್ರೆಸ್ ಘಟಕದ ಕಾರ್ಯಾಲಯಕ್ಕೆ ಬಂದಿದೆ. ಮೇ 16ರಂದು ಚುನಾವಣೆ ನಡೆಯಲಿರುವ ಪುದುಚೇರಿಯಲ್ಲಿ ರಾಹುಲ್ ಗಾಂಧಿ ನಾಳೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ರಾಹುಲ್‌ಗೆ ಜೀವ ಬೆದರಿಕೆ ಒಡ್ಡುವ ಪತ್ರವನ್ನು ತಮಿಳಿನಲ್ಲಿ ಬರೆಯಲಾಗಿದೆ ಇದನ್ನು ಕಾಂಗ್ರೆಸ್ ನಾಯಕರಾದ ನಾರಾಯಣ ಸ್ವಾಮಿ ಅವರು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ನಾಯಕರಾದ ಆನಂದ್ ಶರ್ಮಾ ಮತ್ತು ಅಹ್ಮದ್ ಪಟೇಲ್ ಅವರು ದಿಲ್ಲಿಯಲ್ಲಿಂದು ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ರಾಹುಲ್ ಗಾಂಧಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕೇಳಿಕೊಳ್ಳಲಿದ್ದಾರೆ. ಮಾತ್ರವಲ್ಲದೆ ಜೀವ ಬೆದರಿಕೆ ಒಡ್ಡುವ ಪತ್ರ ಬಂದಿರುವ ಬಗ್ಗೆ ತನಿಖೆ ನಡೆಸುವಂತೆ ಕೋರಲಿದ್ದಾರೆ.
ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ಉನ್ನತ ವಿಶೇಷ ರಕ್ಷಣಾ ದಳದ ಭದ್ರತೆ ಇದೆ. ಇದು ದೇಶದ ಉನ್ನತ ಮಟ್ಟದ ಭದ್ರತೆಯಾಗಿದೆ. ಕೇವಲ ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಹಾಗೂ ಸೋನಿಯಾ-ರಾಹುಲ್ ಕುಟುಂಬದವರಿಗೆ ಮಾತ್ರವೇ ಎಸ್‌ಪಿಜಿ ಭದ್ರತೆ ನೀಡಲಾಗಿದೆ.
ವಿಶೇಷ ಭದ್ರತೆ ವಿಭಾಗದಲ್ಲಿ ಮಾಜಿ ಪ್ರಧಾನಿಯ ಕುಟುಂಬದವರನ್ನು ಸೇರಿಸುವ ಕಾನೂನಿಗೆ 1991ರಲ್ಲಿ ರಾಜೀವ್ ಗಾಂಧಿ ನಿಧನ ನಂತರ ತಿದ್ದುಪಡಿ ತರಲಾಗಿತ್ತು.