ದೇಶ

ಉತ್ತರಾಖಂಡ ಚಾರ್ ಧಾಮ್ ತೀರ್ಥಯಾತ್ರೆ ಆರಂಭ

Srinivasamurthy VN

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಐತಿಹಾಸಿಕ ಚಾರ್ ಧಾಮ್ ಯಾತ್ರೆಗೆ ಅಕ್ಷಯ ತೃತೀಯ ದಿನವಾದ ಸೋಮವಾರ ಚಾಲನೆ ನೀಡಲಾಗಿದೆ.

ಕಳೆದ ಆರು ತಿಂಗಳ ಕಾಲ ಮುಚ್ಚಿದ್ದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ರುದ್ರಪ್ರಯಾಗದ ಕೇದಾರನಾಥ ದೇವಾಲಯ, ಉತ್ತರಕಾಶಿ  ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಲ್ಲಿ ಭಕ್ತರ ಆಗಮನಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಯಾತ್ರಾ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಉತ್ತರಾಖಂಡ  ಚಾರ್ ಧಾಮ್ ಯಾತ್ರಾ ಮಂಡಳಿ ಹೇಳಿದೆ.

ಸೋಮವಾರ ಬೆಳಗ್ಗೆ 7 ಗಂಟೆಗೆ ದೇವಾಲಯದ ಹಿರಿಯ ಅರ್ಚಕರು ಮಂತ್ರಘೋಷಗಳ ಮೂಲಕ ಕೇದಾರನಾಥ ದೇವಾಲಯ ಗರ್ಭಗುಡಿ ದ್ವಾರ ತೆರೆದರು. ಈ ವೇಳೆ ಸಾವಿರಾರು ಭಕ್ತರು  ಆಗಮಿಸಿದ್ದರು. ಚಮೋಲಿಯಲ್ಲಿರುವ ಬದರಿನಾಥ ದೇವಾಲಯ ಮೇ 11ರಂದು ಅಂದರೆ ನಾಳೆ ದರ್ಶನಕ್ಕೆ ತೆರೆಯಲಾಗುತ್ತದೆ. ಬದರಿನಾಥ ದೇವಾಲಯ ಸಮುದ್ರ ಮಟ್ಟದಿಂದ 3,133 ಮೀ.  ಹಾಗೂ ಕೇದಾರನಾಥ ದೇವಾಲಯ 3,581 ಮೀ. ಎತ್ತರದಲ್ಲಿದ್ದು, ಪ್ರತಿ ವರ್ಷ ನವೆಂಬರ್‌ನಿಂದ ಮೇವರೆಗೆ ದೇವಾಲಯದಲ್ಲಿ ದರ್ಶನ ಸ್ಥಗಿತಗೊಳಿಸಲಾಗುತ್ತದೆ.

SCROLL FOR NEXT