ಮುಂಬೈ: ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿತ್ತು, ಆಗ ನಾನು ಆ ಸ್ಥಳದಲ್ಲಿದ್ದೆ ಎಂದು ಇಂದ್ರಾಣಿ ಮುಖರ್ಜಿಯ ಕಾರಿನ ಮಾಜಿ ಚಾಲಕ ಶ್ಯಾಂವರ್ ರೈ ಹೇಳಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರಾದ ರೈ, ಈ ಹತ್ಯೆಯಲ್ಲಿ ತನ್ನ ಪಾತ್ರವೇನಿತ್ತು ಎಂಬುದನ್ನೂ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಸತ್ಯವನ್ನು ನುಡಿಯಲು ಯಾರೊಬ್ಬರೂ ನನ್ನ ಮೇಲೆ ಒತ್ತಡ ಹೇರಿಲ್ಲ. ಆದರೆ ನನ್ನ ಕೃತ್ಯದ ಬಗ್ಗೆ ಪ್ರಾಯಶ್ಚಿತ ಮಾಡುವ ಸಲುವಾಗಿ ನಾನಿಲ್ಲಿಗೆ ಬಂದಿದ್ದೇನೆ. ಈ ಪ್ರಕರಣದಲ್ಲಿ ನನಗೆ ಕ್ಷಮೆ ನೀಡಬೇಕೆಂದು ರೈ ಬಿನ್ನವಿಸಿದ್ದಾರೆ.
ನಾನು ಸತ್ಯವನ್ನು ಬಹಿರಂಗ ಪಡಿಸಲು ಇಚ್ಛಿಸುತ್ತಿದ್ದು, ತನಗೆ ಆ ಪ್ರಕರಣದಲ್ಲಿ ಕ್ಷಮೆ ನೀಡಬೇಕೆಂದು ರೈ ಅವರು ಎರಡು ಪುಟಗಳ ಪತ್ರವನ್ನು ನ್ಯಾಯಾಲಯಕ್ಕೆ ಬರೆದಿದ್ದರು. ಈ ಪತ್ರದ ಬೆನ್ನಲ್ಲೇ ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
2012 ಏಪ್ರಿಲ್ 24 ರಂದು ಶೀನಾ ಬೋರಾ ಹತ್ಯೆಯಾಗಿದ್ದಳು. ಸ್ಟಾರ್ ಟಿವಿಯ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ತನ್ನ ಮಾಜಿ ಪತಿ ಸಿದ್ಧಾರ್ಥ್ ದಾಸ್‌ನೊಂದಿಗಿನ ದಾಂಪತ್ಯದಲ್ಲಿ ಹುಟ್ಟಿದ ಮಗಳು ಶೀನಾ ಬೋರಾ (24)ನ್ನು ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಂವರ್ ರೈ ಅವರ ಸಹಾಯದಿಂದ ಹತ್ಯೆ ಮಾಡಿ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ಶೀನಾಳ ಅಮ್ಮ ಇಂದ್ರಾಣಿ ಮುಖರ್ಜಿ (43), ಮಾಜಿ ಪತಿ ಸಂಜೀವ್ ಖನ್ನಾ, ಮಾಜಿ ಚಾಲಕ ಶ್ಯಾಂವರ್ ರೈ , ಪೀಟರ್ ಮೊದಲಾದವರು ಆರೋಪಿಗಳಾಗಿದ್ದಾರೆ. ಮುಂಬೈ ಕೋರ್ಟ್ ಬುಧವಾರ ಈ ಆರೋಪಿಗಳ ನ್ಯಾಯಾಂಗ ಬಂಧನವನ್ನು ಮೇ 17ರ ವರೆಗೆ ವಿಸ್ತರಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos