ವಾಷಿಂಗ್ಟನ್: ಇಂಡೋ-ಚೀನಾ ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸುತ್ತಿದೆ ಎಂದು ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.
ಚೀನಾ ಪೀಪಲ್ಸ್ ರಿಪಬ್ಲಿಕ್ ನ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆ ಕುರಿತು 2016ರ ವಾರ್ಷಿಕ ವರದಿಯನ್ನು ಅಮೆರಿಕ ಕಾಂಗ್ರೆಸ್ ಗೆ ಸಲ್ಲಿಸಿದ ಹಿನ್ನಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕದ ಪೂರ್ವ ಏಷ್ಯಾ ವಲಯದ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿ ಅಬ್ರಾಹಂ ಎಂ ಡೆನ್ಮಾರ್ಕ್ ಅವರು, ಇಂಡೋ-ಚೀನಾ ಗಡಿಯಲ್ಲಿ ಚೀನಾ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಪ್ರಮುಖವಾಗಿ ಚೀನಾ ಸರ್ಕಾರದ ಈ ನಡೆಯ ಹಿಂದಿನ ಉದ್ದೇಶವೇನು ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಚೀನಾ ಸೇನಾ ಸಾಮರ್ಥ್ಯದ ಕುರಿತು ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೆನ್ಮಾರ್ಕ್ ಅವರು, "ನಮ್ಮ ಭದ್ರತಾ ಅಧಿಕಾರಿಗಳು ಗಮನಿಸಿರುವಂತೆ ಭಾರತ-ಚೀನಾ ಗಡಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಚೀನಾ ಸೇನಾ ನಿಯೋಜನೆ ಮಾಡುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಣೆ ಮಾಡುತ್ತಿದೆ. ಇದು ಮಾತ್ರವಲ್ಲದೇ ತನ್ನ ಬಂಕರ್ ಗಳ ಸಾಮರ್ಥ್ಯವನ್ನು ಚೀನಾ ಹೆಚ್ಚಿಸುತ್ತಿದ್ದು, ಚೀನಾದ ಈ ನಡೆ ಹಿಂದಿನ ಉದ್ದೇಶ ಏನು? ಎಂಬುದು ನಮಗೆ ತಿಳಿಯುತ್ತಿಲ್ಲ. ಆದರೆ ಒಂದು ವೇಳೆ ಚೀನಾ ತನ್ನ ಬಾಹ್ಯ ಆಂತಕದ ವಿರುದ್ಧದ ಭದ್ರತೆಗಾಗಿ ಸೇನೆಯನ್ನು ಗಡಿಯಲ್ಲಿ ನಿಯೋಜಿಸುತ್ತಿದ್ದರೆ, ಇಷ್ಟು ಪ್ರಮಾಣದ ಸೇನಾ ನಿಯೋಜನೆಯ ಅಗತ್ಯತೆ ಇದೆಯೇ ಎಂದು ಡೆನ್ಮಾರ್ಕ್ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಡೆನ್ಮಾರ್ಕ್ ಅವರು, ಭಾರತ ಪ್ರವಾಸ ತಮ್ಮ ಜೀವನದ ಅಮೂಲ್ಯ ಪ್ರವಾಸಗಳಲ್ಲಿ ಒಂದು ಬಣ್ಣಿಸಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹೀಗೆ ಸೌಹಾರ್ಧಯುತವಾಗಿ ಮುಂದುವರೆಯಲಿದ್ದು, ಭಾರತ ತನ್ನ ಸತ್ವಯುತ ಮೌಲ್ಯಾಧಾರಗಳಿಂದ ಕೂಡಿದ ಆಂತರಿಕ ಸಾಮರ್ಥ್ಯದಿಂದಲೇ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಡೆನ್ಮಾರ್ಕ್ ಅಭಿಪ್ರಾಯಪಟ್ಟಿದ್ದರು.