ದೇಶ

ಬಂಗಾಳದಲ್ಲಿ ದೋಣಿ ದುರಂತ; ಕನಿಷ್ಠ 1 ಸಾವು, 25ಕ್ಕೂ ಹೆಚ್ಚು ಮಂದಿ ನಾಪತ್ತೆ

Srinivasamurthy VN

ಕೋಲ್ಕತಾ: ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಟ 1 ಸಾವು ಸಂಭವಿಸಿದ್ದು, 25ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬೋಟ್ ವೊಂದು ಹೂಗ್ಲಿ ನದಿಯಲ್ಲಿ ಮುಳುಗಡೆಯಾಗಿದ್ದು, ಘಟನೆಯಲ್ಲಿ ಕನಿಷ್ಠ ಓರ್ವ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ. ಇದಲ್ಲದೆ 25ಕ್ಕೂ ಹೆಚ್ಚು ಪ್ರಯಾಣಿಕರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬವಾದ ಹಿನ್ನಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ ಎಂದು  ಹೇಳಲಾಗುತ್ತಿದೆ.

ಇದೀಗ ರಕ್ಷಣಾ ಕಾರ್ಯಾಚರಣೆಗೆ ವಿಳಂಬವಾಗಿ ಆಗಮಿಸಿರುವ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ.  ಉದ್ರಿಕ್ತ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದು, ಘಟನಾ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನೆಲೆಸಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ನಿನ್ನೆ ರಾತ್ರಿಯೇ ಬೋಟ್  ಮುಳುಗಡೆಯಾಗಿದ್ದು, ಇಂದು ಬೆಳಗ್ಗೆಯಾದರೂ ಪೊಲೀಸರಾಗಲಿ ಅಥವಾ ರಕ್ಷಣಾ ಕಾರ್ಯಾಚರಣೆಯ ತಂಡವಾಗಲಿ ಆಗಮಿಸಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಘಟನಾ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ಸೇರಿದಂತೆ ಸ್ಥಳೀಯ ಜನಪ್ರತಿನಿಧಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

SCROLL FOR NEXT