ನವದೆಹಲಿ: ಪ್ರತಿಪಕ್ಷಗಳ ವಾಗ್ದಾಳಿಯ ಹಿನ್ನೆಲೆಯಲ್ಲಿ ಹಿಂದುಸ್ತಾನ್ ಪತ್ರಿಕೆಯ ಹಿರಿಯ ಪತ್ರಕರ್ತ ರಾಜದೇವ್ ರಂಜನ್ ಅವರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸೋಮವಾರ ಘೋಷಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿತಿಶ್ ಕುಮಾರ್ ಅವರು, ಸಿವಾನ್ ಜಿಲ್ಲೆಯ ಪತ್ರಕರ್ತನ ಹತ್ಯೆಯನ್ನು ಖಂಡಿಸಿದರು. ಅಲ್ಲದೆ ಪತ್ರಕರ್ತರ ಮೇಲೆ ದಾಳಿ ಮಾಡುವುದು ನನ್ನ ಮೇಲೆ ದಾಳಿ ಮಾಡಿದಂತೆ ಎಂದರು.
'ಯಾವುದೇ ಪತ್ರಕರ್ತನ ಮೇಲಿನ ದಾಳಿಯನ್ನು ನಾವು ಸರ್ಕಾರದ ಮೇಲೆ ನಡೆದ ದಾಳಿ ಅಂತ ಭಾವಿಸುತ್ತೇವೆ. ರಾಜ್ಯ ಪೊಲೀಸರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ರಾಜದೇವ್ ರಂಜನ್ ಅವರ ಕುಟುಂಬದ ಮನವಿ ಮೇರೆಗೆ ಪ್ರಕರಣವನ್ನು ನಾವು ಸಿಬಿಐಗೆ ವಹಿಸಲು ನಿರ್ಧರಿಸಿದ್ದೇವೆ' ಎಂದರು.
ಕಳೆದ ಶುಕ್ರವಾರ ಸಂಜೆ ದುಷ್ಕರ್ಮಿಗಳು ರಂಜನ್ ಅವರ ಮೇಲೆ ಗುಂಡುಹಾರಿಸಿ ಹತ್ಯೆ ಮಾಡಿದ್ದರು. ಘಟನೆ ಕುರಿತು ತನಿಖೆ ಆರಂಭಿಸಿದ್ದ ಬಿಹಾರ ಪೊಲೀಸರು ಒಟ್ಟು 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.