ಅಪಾರ್ಟ್ ಮೆಂಟಿನ 19ನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಬ್ರಿಟಾನಿಕಾದ ಸಿಒಒ
ಎನ್ ಸೈಕ್ಲೊಪೀಡಿಯಾ ಬ್ರಿಟಾನಿಕಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಗುರಗಾಂವ್ ನ ಡಿಎಲ್ ಎಫ್ 3ನೇ ಹಂತದಲ್ಲಿರುವ...
ಗುರುಗಾಂವ್: ಎನ್ ಸೈಕ್ಲೊಪೀಡಿಯಾ ಬ್ರಿಟಾನಿಕಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಗುರಗಾಂವ್ ನ ಡಿಎಲ್ ಎಫ್ 3ನೇ ಹಂತದಲ್ಲಿರುವ ಕಟ್ಟಡದ 19ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎನ್ ಸೈಕ್ಲೊಪೀಡಿಯಾ ಬ್ರಿಟಾನಿಕಾದ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿನೀತ್ ವಿಗ್, ನಿನ್ನೆ ಬೆಳಗ್ಗೆ ಕಟ್ಟಡದ 19ನೇ ಮಹಡಿಯಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾರೆ. ಅಪಾರ್ಟ್ ಮೆಂಟನ್ನು ಸ್ವಚ್ಛಗೊಳಿಸುವವರಿಂದ ಪ್ರಕರಣ ಬೆಳಕಿಗೆ ಬಂದಿದೆ.
ವಿಗ್ ಧರಿಸಿದ್ದ ಶರ್ಟ್ ನಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ, ''ನನ್ನ ಜೀವನವನ್ನು ನಾನೇ ಕೊನೆಗಾಣಿಸುತ್ತೇನೆ, ಇದಕ್ಕೆ ಯಾರೂ ಜವಾಬ್ದಾರರಲ್ಲ. ನನಗೆ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ, ಸಾರಿ, ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೇನೆ. ಇದರಿಂದ ಹೊರಬರಲು ಆತ್ಮಹತ್ಯೆ ಬಿಟ್ಟು ನನಗೆ ಬೇರಾವುದೇ ದಾರಿ ಕಾಣುತ್ತಿಲ್ಲ. ಹೌದು, ನಾನೊಬ್ಬ ಹೇಡಿ. ನಾನು ಜೀವನವನ್ನು ಎದುರಿಸಬೇಕಾಗಿತ್ತು'' ಎಂದು ಬರೆದಿದ್ದಾರೆ.
ವಿನೀತ್ ವಿಗ್ ಅವರು ಗುರುಗಾಂವ್ ನ ಡಿಎಲ್ ಎಫ್ ಬೆಲ್ವೆದೆರೆ ಪಾರ್ಕ್ ಅಪಾರ್ಟ್ ಮೆಂಟ್ ನ ಬ್ಲಾಕ್ ಡಿಯಲ್ಲಿ ತಮ್ಮ ಪತ್ನಿ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಮಗನ ಸಾವಿನ ಸುದ್ದಿ ಕೇಳಿದ ವಿಗ್ ಅವರ ತಂದೆಗೆ ಹೃದಯಾಘಾತವಾಗಿದೆ.
ನಿನ್ನೆ ಭಾನುವಾರ ಬೆಳಗ್ಗೆ 9 ಗಂಟೆ ವೇಳೆಗೆ ಅಪಾರ್ಟ್ ಮೆಂಟನ್ನು ಸ್ವಚ್ಥಗೊಳಿಸುವವರು ಬ್ಲಾಕ್-ಸಿಯಲ್ಲಿ ಕಸ ಗುಡಿಸುತ್ತಿದ್ದ ವೇಳೆ ವೆಂಟಿಲೇಶನ್ ನಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರು ಅಪಾರ್ಟ್ ಮೆಂಟಿನ ಭದ್ರತಾ ನಿಯಂತ್ರಣ ಕೊಠಡಿಗೆ ತಿಳಿಸಿದ್ದು,ಅವರು ಕುಟುಂಬದವರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರಿಗೆ ವಿಷಯ ತಲುಪಿಸಲಾಯಿತು.
ವಿನೀತ್ ವಿಗ್ ಎಂದಿನಂತೆ ನಿನ್ನೆ ಕೂಡ ಬೆಳಗ್ಗೆ ಎದ್ದು ವಾಕಿಂಗ್ ಗೆ ತೆರಳಿದ್ದರು. ಯಾವಾಗಲೂ ಹಿಂತಿರುಗುತ್ತಿದ್ದ ಸಮಯಕ್ಕೆ ಬಂದಿರಲಿಲ್ಲ. ಕೆಲವು ಸಲ ವಾಕಿಂಗ್ ಮುಗಿಸಿ ಬರುವಾಗ ತಡವಾಗುತ್ತಿದ್ದರಿಂದ ಕುಟುಂಬದವರಿಗೆ ಸಂಶಯ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿನೀತ್ ಈ ಹಿಂದೆ ವಿಪ್ರೋ ಕಂಪೆನಿಯಲ್ಲಿ ಕೆಲಸ ಮಾಡಿದ್ದರಂತೆ. ವಿನೀತ್ ಅವರ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.