ಲಖನೌ: ಉತ್ತರ ಪ್ರದೇಶದಲ್ಲಿ ಬ್ರಿಟೀಷ್ ಹೈ ಕಮಿಷನ್ ವೀಸಾ ಕೇಂದ್ರವನ್ನು ಪ್ರಾರಂಭಿಸಿದೆ. ಇದರಿಂದಾಗಿ ಉತ್ತರ ಪ್ರದೇಶ ಹಾಗೂ ನೆರೆಯ ರಾಜ್ಯಗಳಲ್ಲಿರುವ ಜನರಿಗೆ ಯುಕೆ ವೀಸಾಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸುಲಭವಾಗಲಿದೆ.
ಪ್ರತಿ ತಿಂಗಳ ಮೂರನೇ ಗುರುವಾರದಂದು ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ವೀಸಾ ಕೇಂದ್ರ ಕಾರ್ಯನಿರ್ವಹಿಸಲಿದ್ದು ಇಲ್ಲಿನ ಜನತೆ ಬ್ರಿಟನ್ ವೀಸಾಗಾಗಿ ಅರ್ಜಿಸಲ್ಲಿಸಲು ದೆಹಲಿಗೆ ಹೋಗುವುದು ತಪ್ಪಲಿದೆ. ಅಷ್ಟೇ ಅಲ್ಲದೇ ಇದರಿಂದ ನೆರೆ ರಾಜ್ಯಗಳಾದ ಉತ್ತರಾಖಂಡ್ ಹಾಗೂ ಬಿಹಾರದ ಜನರಿಗೂ ಅನುಕೂಲವಾಗಲಿದೆ ಎಂದು ಯುಕೆ ಹೈ ಕಮಿಷನ್ ನ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟೀಷ್ ಹೈ ಕಮಿಷನ್ ದೇಶಾದ್ಯಂತ 15 ವೀಸಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ, ಪ್ರತಿ ಅರ್ಜಿದಾರರಿಗೂ 8 ,499 ರೂ ಗಳ ವೀಸಾ ಶುಲ್ಕವನ್ನು ವಿಧಿಸಲಾಗುತ್ತದೆ.